ಇಂದು ಬಹುನಿರೀಕ್ಷಿತ ಮೈಸೂರು ಮೇಯರ್ ಚುನಾವಣೆ: ತಡರಾತ್ರಿಯವರೆಗೂ ಮುಂದುವರೆದ ರಾಜಕಾರಣ!

ಹೈಲೈಟ್ಸ್‌:

  • ಇಂದು ಬಹುನಿರೀಕ್ಷಿತ ಮೈಸೂರು ಮೇಯರ್ ಚುನಾವಣೆ, ಎಲ್ಲರ ಚಿತ್ತ ಕಿಂಗ್‌ ಮೇಕರ್‌ ಜೆಡಿಎಸ್‌ ನತ್ತ
  • ಪಾಲಿಕೆಯಲ್ಲಿ ಇದುವರೆಗೂ 65 ಸದಸ್ಯ ಬಲವಿದ್ದು, ಯಾವೊಂದು ಪಕ್ಷಕ್ಕೂ ಬಹುಮತವಿಲ್ಲ
  • ಜೆಡಿಎಸ್‌ ನಿರ್ಣಾಯಕ ಪಾತ್ರ, ಮೇಯರ್‌ ಗಾದಿಗಾಗಿ ಜೆಡಿಎಸ್‌ ಎದುರು ಮಂಡಿಯೂರಿದ ಬಿಜೆಪಿ, ಕಾಂಗ್ರೆಸ್‌

ಮೈಸೂರು: ಬಹುನಿರೀಕ್ಷಿತ ಮೈಸೂರು ಪಾಲಿಕೆ ಚುನಾವಣೆ ಫೆ.24ರಂದು ನಡೆಯಲಿದ್ದು, ಎಲ್ಲರ ಚಿತ್ತ ಕಿಂಗ್‌ ಮೇಕರ್‌ ಜೆಡಿಎಸ್‌ ನತ್ತ ನೆಟ್ಟಿದೆ. ಈ ನಡುವೆ ಕಾಂಗ್ರೆಸ್‌–ಜೆಡಿಎಸ್‌ನ ಮೈತ್ರಿಯೇ ಮುಂದುವರೆಯಲಿದೆಯಾ? ಬಿಜೆಪಿ–ಜೆಡಿಎಸ್‌ನ ಸಂಬಂಧ ಗಟ್ಟಿಗೊಳ್ಳಿದೆಯಾ? ಎಂಬ ಬಗ್ಗೆ ನಿನ್ನೆ ತಡರಾತ್ರಿ ಕಳೆದರೂ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.

ಪಾಲಿಕೆಯಲ್ಲಿ ಇದುವರೆಗೂ 65 ಸದಸ್ಯ ಬಲವಿದ್ದು, ಯಾವೊಂದು ಪಕ್ಷಕ್ಕೂ ಬಹುಮತವಿಲ್ಲ. ಮೂರು ಪಕ್ಷಗಳು ತಡರಾತ್ರಿಯವರೆಗೂ ಸರಣಿ ಸಭೆಗಳನ್ನು ನಡೆಸಿದರೂ ಮೇಯರ್‌–ಉಪ ಮೇಯರ್‌ ಆಯ್ಕೆಗಾಗಿ ಮೈತ್ರಿಕೂಟ ರವೆನೆಯಾಗಿಲ್ಲ. ಮೈತ್ರಿ ರಚನೆಯ ವಿಚಾರದಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್‌ ಪಕ್ಷ ಮೇಯರ್‌ ಗಾದಿಗಾಗಿ ಜೆಡಿಎಸ್‌ ಎದುರು ಮಂಡಿಯೂರಿ ಕುಳಿತಿದೆ.

ಮೇಯರ್‌ ಚುನಾವಣೆ ಹಿನ್ನೆಲೆ ಮೈಸೂರಿಗೆ ಹೆಚ್ ಡಿಕೆ ಆಗಮಿಸಿದ್ದು, ಅವರನ್ನು ಭೇಟಿಯಾಗಲು ತಡರಾತ್ರಿಯವರೆಗೂ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಪ್ರತ್ಯೇಕ ಕೋಣೆಗಳಲ್ಲಿ ಕಾದು ಕೂತಿದ್ದರು. ಇಬ್ಬರಿಗೂ ತಾವು ದೇವೇಗೌಡರ ಜೊತೆ ಚರ್ಚಿಸಿ ಯಾರೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೇವೆ ಎಂಬುದನ್ನು ಹೇಳುತ್ತೇವೆಂದು ಹೆಚ್ಡಿಕೆ ಈ ವೇಳೆ ಉಭಯ ನಾಯಕರಿಗೂ ತಿಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಈ ನಡುವೆ ಹಚ್‌ ಡಿ ಕುಮಾರಸ್ವಾಮಿಯವರು ನಿನ್ನೆ ಮಾಧ್ಯಮಗಳಿಗೆ ಕೈ ಮುಖಂಡರ ವಿಚಾರವಾಗಿ ಅಸಮಾಧಾನಗೊಂಡ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಜೆಡಿಎಸ್‌ನ ಪ್ರಭಾವಿ ಶಾಸಕ ಸಾ.ರಾ.ಮಹೇಶ್ ಜೊತೆ ಮೊಬೈಲ್‌ನಲ್ಲೇ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.

ಈ ವೇಳೆ ಡಿಕೆಶಿ ಹೆಚ್‌ಡಿಕೆ ಜೊತೆ ಮಾತನಾಡಿದಾಗ, ಪಾಲಿಕೆಯಲ್ಲಿ ನಮ್ಮ ನಡುವಿನ ಮೈತ್ರಿ ಮುರಿಯುವುದು ಬೇಡ. ಅಲ್ಲದೇ ಜೆಡಿಎಸ್‌ ಗೆ ಮೇಯರ್‌ ಹುದ್ದೆ ಬಿಟ್ಟುಕೊಡುವುದಾಗಿಯೂ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ವಿದ್ಯಮಾನದ ಬಳಿಕ ಜೆಡಿಎಸ್‌ನಲ್ಲಿ ಮೇಯರ್‌ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂಬುದು ತಿಳಿದು ಬಂದಿದೆ.

ಬಿಜೆಪಿಯೊಂದಿಗೆ ಹೊಂದಾಣಿಕೆಯಾದರೆ ಸುನಂದಾ ಪಾಲನೇತ್ರ ಮುಂದಿನ ಮೇಯರ್‌?
ಪಾಲಿಕೆಯಲ್ಲಿ ಜೆಡಿಎಸ್‌ ಜೊತೆಗೆ ಬಿಜೆಪಿ‌ ಕೈ ಜೋಡಿಸಿದರೆ ನಿರೀಕ್ಷೆಯಂತೆ ಮೂರನೇ ಬಾರಿಗೆ ಸದಸ್ಯೆಯಾಗಿ ಆಯ್ಕೆಯಾಗಿರುವ 59ನೇ ವಾರ್ಡ್‌ನ ಸದಸ್ಯೆ ಸುನಂದಾ ಪಾಲನೇತ್ರ ಮೇಯರ್‌ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಸುನಂದಾ ಪಾಲನೇತ್ರ ಪತಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸೋದರ ಸಂಬಂಧಿ. ವರಿಷ್ಠರ ಒಲವು ಸಹ ಹಿರಿಯ ಸದಸ್ಯೆಗಿದೆ. ಬಹುತೇಕ ಸದಸ್ಯರು ಸುನಾಂದರವರನ್ನು ಮೇಯರ್‌ ಆಗಿ ಒಪ್ಪಿಕೊಳ್ಳಲು ಒಲವು ತೋರಿದ್ದಾರೆ ಎನ್ನಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *