ಕರ್ನಾಟಕ ಗಡಿಯಲ್ಲಿ ನಿರ್ಬಂಧ: ಮಧ್ಯ ಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಕೇರಳ ಸಿಎಂ ಪತ್ರ
ತಿರುವನಂತಪುರಂ: ದೇವರ ನಾಡಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಕರ್ನಾಟಕದ ವಿರುದ್ಧ ಕೇರಳ ಸರ್ಕಾರ ಕೇಂದ್ರಕ್ಕೆ ದೂರು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೇರಳ ಸಿಎಂ, ಅಂತರಾಜ್ಯ ಗಡಿ ಬಂದ್ ಮಾಡುವುದು ಮತ್ತು ನಿರ್ಬಂಧ ವಿಧಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಅಂತರಾಜ್ಯ ಪ್ರಯಾಣಕ್ಕೆ ಯಾವುದೇ ರಾಜ್ಯ ನಿರ್ಬಂಧ ಹೇರುವಂತಿಲ್ಲ ಎಂದು ಹೇಳಿದ್ದಾರೆ.
ನೆರೆಯ ರಾಜ್ಯಕ್ಕೆ ಪ್ರಯಾಣಿಸುವಾಗ ಜನರು ಎದುರಿಸುತ್ತಿರುವ ಕಷ್ಟಗಳನ್ನು ಪರಿಹರಿಸಲು ಪ್ರಧಾನಿ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು. ಯಾವುದೇ ರಾಜ್ಯಗಳು ಅಂತರರಾಜ್ಯ ಪ್ರಯಾಣವನ್ನು ತಡೆಯಬಾರದು ಎಂಬ ಕೇಂದ್ರ ಸರ್ಕಾರದ ಸೂಚನೆಗೆ ವಿರುದ್ಧವಾಗಿ ಈ ನಿರ್ಬಂಧಗಳಿವೆ ಎಂದು ಪಿಣರಾಯಿ ದೂರಿದ್ದಾರೆ.
ಕರ್ನಾಟಕದ ನಿರ್ಬಂಧಗಳಿಂದಾಗಿ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಾಗಿ ಹೋಗುವ ರೋಗಿಗಳು ಸೇರಿದಂತೆ ಅನೇಕ ಜನರು ರಾಜ್ಯದ ಗಡಿಯಲ್ಲಿ ಅನಗತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರುವುದು ಭಾರತ ಸರ್ಕಾರದ ಸೂಚನೆಗೆ ವಿರುದ್ಧವಾಗಿದೆ ಎಂದು ಕೇರಳ ಸಿಎಂ ದೂರಿದ್ದಾರೆ.
ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಮತ್ತು ರಾಜ್ಯ ಪ್ರವೇಶಿಸುವ ಕೆಲವು ಮಾರ್ಗಗಳನ್ನು ಸಹ ಬಂದ್ ಮಾಡಲಾಗಿದೆ.