2ಎ ಮೀಸಲು: ಕಾಲಮಿತಿ ಸಾಧ್ಯವೇ ಇಲ್ಲ ಎಂದ ಸರಕಾರ; ಹೋರಾಟ ಮುಂದುವರಿಸಲು ಪಂಚಮಸಾಲಿಗಳ ನಿರ್ಧಾರ

ಹೈಲೈಟ್ಸ್‌:

  • ಮುಂದುವರೆದ ಸ್ವಾಮೀಜಿಗಳ ಪಂಚಮಸಾಲಿ 2ಎ ಮೀಸಲಾತಿ ಹೋರಾಟ
  • ಮೀಸಲು ನೀಡಲು ಕಾಲಮಿತಿ ಸಾಧ್ಯವೇ ಇಲ್ಲ ಎಂದು ಸರಕಾರ ಸಂದೇಶ
  • ಮಾರ್ಚ್‌ 4ರವರೆಗೂ ಹೋರಾಟ ಮುಂದುವರೆಸಲು ಸ್ವಾಮೀಜಿಗಳ ತೀರ್ಮಾನ

ಪಂಚಮಸಾಲಿ ಸಮುದಾಯದ ಮುಖಂಡರು, ಮಾರ್ಚ್ 4 ರವರೆಗೂ ತಮ್ಮ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಜರುಗಿದ ನಿರ್ಣಾಯಕ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಮಾ.4ರ ಸಂಜೆ 4ರವರೆಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟ ಭರವಸೆ ನೀಡದಿದ್ದರೆ ‘ಆಮರಣಾಂತ ಉಪವಾಸ ಸತ್ಯಾಗ್ರಹ’ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಫೆ.22ರಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಧರಣಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ, ಭಿನ್ನಾಭಿಪ್ರಾಯಗಳ ಪರಾಮರ್ಶೆ ಮತ್ತು ಸರಕಾರಕ್ಕೆ ಮುಂದಿನ ಸೂಚನೆ ನೀಡುವ ಕುರಿತು ಪಂಚಮಸಾಲಿ ಮುಖಂಡರು ಈ ವೇಳೆ ಚರ್ಚಿಸಿದರು.

ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಜರುಗಿದ ಈ ಸಭೆಯಲ್ಲಿ ಶಾಸಕರಾದ ಅರವಿಂದ್‌ ಬೆಲ್ಲದ, ಸಿದ್ದು ಸವದಿ ಹಾಗೂ ವಿಜಯಾನಂದ ಕಾಶಪ್ಪನವರ್‌ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

ಬೆಂಬಲ ಸೂಚಿಸಿ
ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆ ತಾಳ್ಮೆ ವಹಿಸುವಂತೆ ರಾಜಕೀಯ ಮುಖಂಡರಿಗೆ ಖಡಕ್‌ ಸೂಚನೆ ನೀಡಲಾಯಿತು. ವೈಯಕ್ತಿಕ ನಿಂದನೆ ಮಾಡದಂತೆ ತಿಳಿಸಲಾಗಿದ್ದು, ಸಮುದಾಯದ ಮುಖಂಡರಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಲು ಶ್ರೀಗಳು ಮನವಿ ಮಾಡಿದ್ದಾರೆ. ಅಧಿವೇಶನದಲ್ಲಿ ಮೀಸಲು ಕುರಿತು ಬಸನಗೌಡ ಪಾಟೀಲ ಯತ್ನಾಳ್‌ ವಿಷಯ ಪ್ರಸ್ತಾಪಿಸಿದಾಗ ಪಕ್ಷಭೇದ ಮರೆತು, ಬೆಂಬಲ ಸೂಚಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲು ನೀಡಲು ಸರಕಾರ ಕೊನೆಯ ದಿನಾಂಕವನ್ನು ಸ್ಪಷ್ಟಪಡಿಸಿದರೆ ಧರಣಿ ಹಿಂಪಡೆಯುವ ಕುರಿತು ಚಿಂತಿಸಲಾಗುವುದು ಎಂದು ತಿಳಿಸಿದರು.

ಸದ್ಯದ ರಾಜಕೀಯ ಸನ್ನಿವೇಶದಲ್ಲಿಪಂಚಮಧಿಸಾಲಿಗಳ ಪ್ರವರ್ಗ 2ಎ ಪ್ರಸ್ತಾವನೆಗೆ ‘ಕಾಲಮಿತಿ’ ನೀಡಲು ಸಾಧ್ಯವೇ ಇಲ್ಲ” ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯ ಸರಕಾರ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿಗಳ ಮೀಸಲಾತಿ ಹೋರಾಟದ ಮುಂದಿನ ಹಾದಿ ಕ್ಲಿಷ್ಟಕರ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಮೀಸಲಾತಿ ಒತ್ತಾಯಿಸಿ ನಾನಾ ಜಾತಿಗಳು ಆಗ್ರಹಿಸುತ್ತಿರುವ ಹಿನ್ನೆಲೆ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗೆ ಸಮಯ ಬೇಕು. ಒಂದೇ ಸಮುದಾಯಕ್ಕೆ ಸರಕಾರ ಭರವಸೆ ನೀಡುವುದು ಅಸಾಧ್ಯ. ಇತರೆ ಸಮುದಾಯಗಳ ಬೇಡಿಕೆಯನ್ನು ಪರಿಗಣಿಸುವ ಜವಾಬ್ದಾರಿ ಸರಕಾರ ಮೇಲಿದೆ ಎಂದು ಬಸವ ಜಯ ಮೃತ್ಯುಂಜಯ ಶ್ರೀಗಳಿಗೆ ತಿಳಿಸಿರುವ ಸರಕಾರವು ”ಹೋರಾಟ ಹಿಂಪಡೆದು ಸರಕಾರಕ್ಕೆ ಸಹಕರಿಸಿ, ಸರಕಾರವು ನಿಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಂಡಿದೆ. ಮುಂದಿನ ನಿರ್ಧಾರ ನಿಮ್ಮ ವಿವೇಚನೆ ಬಿಟ್ಟಿದ್ದು,” ಎಂಬ ಸೂಕ್ಷ್ಮ ಸಂದೇಶ ನೀಡಿದೆ ಎಂದು ತಿಳಿದು ಬಂದಿದೆ.

ಸಚಿವರಿಗೆ ಆಹ್ವಾನವಿರಲಿಲ್ಲ
ಸಭೆಗೆ ಸಚಿವರಾದ ಸಿ.ಸಿ. ಪಾಟೀಲ್‌ ಮತ್ತು ಮುರುಗೇಶ್‌ ನಿರಾಣಿಗೆ ಆಹ್ವಾನ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಇತರೆ ಸಮುದಾಯದವರಿಗೆ ಅವಕಾಶ ಇರಲಿಲ್ಲ. ”ಸರಕಾರಕ್ಕೆ ಯಾರಾದ್ರೂ ಸುದ್ದಿ ಮುಟ್ಟಿಸೋವ್ರು ಇದ್ರೆ ಎದ್ದು ಹೊರ ಹೋಗಿ,” ಎಂದು ಕಾಶಪ್ಪನ್ನರ ತಿಳಿಸಿದರು ಎನ್ನಲಾಗಿದೆ. ಪೊಲೀಸ್‌, ಗುಪ್ತದಳ ಮತ್ತು ಮಾಧ್ಯಮದವರನ್ನು ಹೊರಗಿಟ್ಟು ಸಭೆ ಆರಂಭಿಸಲಾಯಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *