ಇಂದಿನಿಂದ ದೇಶದಲ್ಲಿ 3ನೇ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭ…! ಆ್ಯಪ್ಗಳಲ್ಲಿ ಹೆಸರು ನೋಂದಣಿಗೆ ಅವಕಾಶ…!
ಇಂದಿನಿಂದ ದೇಶದಲ್ಲಿ 3ನೇ ಹಂತದ ಕೊರೋನಾ ಲಸಿಕೆ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದಕ್ಕಾಗಿ ನೋಂದಣಿ ಕಾರ್ಯವನ್ನು ಇಂದಿನಿಂದ ಆರಂಭಿಸಲಿದೆ.
ಮೂಲಗಳ ಪ್ರಕಾರ ಕೋ-ವಿನ್ 2.0 ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಮೂಲಕ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಲಸಿಕೆ ನೋಂದಣಿಯ ಕೋ-ವಿನ್ 2.0 ಆ್ಯಪ್ ಅಥವಾ ಪೋರ್ಟಲ್ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ-ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ಇನ್ನು ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್, ಭಾವಚಿತ್ರ ಇರುವ ಪೆನ್ಶನ್ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು.
ದೇಶದಲ್ಲಿ ಈಗ ಎರಡು ಲಸಿಕೆಗಳು ಲಭ್ಯ ಇವೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ನ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್ ನ ಕೋವ್ಯಾಕ್ಸಿನ್‌ಗಳನ್ನು ಜನರು ಪಡೆದುಕೊಳ್ಳಬಹುದು. ಆದರೆ, ಇದರಲ್ಲಿ ಯಾವುದನ್ನು ಪಡೆದುಕೊಳ್ಳಬೇಕು ಎಂಬ ಆಯ್ಕೆಯು ಜನರಿಗೆ ಇಲ್ಲ. ಆಸ್ಪತ್ರೆಯವರು ಯಾವ ಲಸಿಕೆ ನೀಡುತ್ತಾರೆಯೋ ಅದನ್ನೇ ಪಡೆದುಕೊಳ್ಳಬೇಕು.