ಸೀರೆ ವಿಷಯಕ್ಕೆ ಶುರುವಾಗಿದ್ದ ಕಿರಿಕ್ಗೆ ಚಾಕು ಇರಿತ…! ಚಪ್ಪಲಿ ಏಟು ತಿಂದಿದ್ದವನ ಸೇಡು ಕೊಲೆಯಲ್ಲಿ ಅಂತ್ಯ…!
ಅವರೆಲ್ಲಾ ಹೊರರಾಜ್ಯದಿಂದ ಸಿಲಿಕಾನ್ ಸಿಟಿಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರು.. ಈ ನಡುವೆ ಅಕ್ಕಪಕ್ಕದ ಮನೆ ವಾಸವಾಗಿದ್ದುಕೊಂಡು ಅನ್ಯೋನ್ಯವಾಗಿ ಜೀವನ ನಡೆಸ್ತಿದ್ರು. ಹೀಗಿದ್ದವರ ಮಧ್ಯೆ ಹಣಕಾಸಿನ ವೈಷಮ್ಯ ಬೆಳೆದು ಮಹಿಳೆಯ ಹತ್ಯೆಯಲ್ಲಿ ಅಂತ್ಯವಾಗಿದೆ.
ಅಂದಹಾಗೇ ಹೀಗೆ ಬರ್ಬರವಾಗಿ ಕೊಲೆಯಾದ ಮಹಿಳೆ ಹೆಸ್ರು ಅಲೀಮಾ. ಮೂಲತಃ ಪಶ್ಚಿಮ ಬಂಗಾಳ ಮೂಲದವ್ರು. ಎಚ್ಎಎಲ್ ಠಾಣಾ ವ್ಯಾಪ್ತಿಯ ಕುಂದ್ಲಹಳ್ಳಿಯಲ್ಲಿ ಮನೆಗೆಲಸ ಮಾಡುತ್ತ ಪತಿಯೊಂದಿಗೆ ಜೀವನ ಸಾಗಿಸುತ್ತಿದ್ಲು..ಈಕೆಯ ಮನೆ ಪಕ್ಕದಲ್ಲೇ ವಾಸವಾಗಿದ್ದ ರಫೀಕ್ ಎಂಬಾತ ಬೆಳ್ಳಂ ಬೆಳಗ್ಗೆ ಕೆಲಸಕ್ಕೆ ಹೋಗಿತ್ತಿದ್ದ ಅಲೀಮಾಳನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಂದು ಕಾಲ್ಕಿತ್ತಿದ್ದಾನೆ.
ಇನ್ನು ಅಲೀಮಾ ಆರೋಪಿ ರಫೀಕ್‌ನಿಂದ ಹತ್ತು ಸಾವಿರ ಸಾಲವನ್ನು ಪಡೆದಿದ್ದಳಂತೆ. ಜೊತೆಗೆ ಸೀರೆ ವ್ಯಾಪಾರ ಮಾಡುತ್ತಿದ್ದ ರಫೀಕ್ ಬಳಿ ಕೆಲ ಸೀರೆಯನ್ನು ಪಡೆದು ಮಾರಾಟ ಮಾಡಿದ್ದಳು. ಸಾಲದ ಹಣ ಮತ್ತು ಸೀರೆ ಮಾರಾಟದ ಹಣ ಎರಡನ್ನು ಅಲೀಮಾ ರಫೀಕ್ ಗೆ ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಕಳೆದ 5 ದಿನಗಳ ಹಿಂದೆ ಇಬ್ಬರಿಗೂ ಜಗಳವಾಗಿದೆ. ಈ ಸಂಧರ್ಭದಲ್ಲಿ ಅಲೀಮಾ ಆರೋಪಿ ರಫೀಕ್ ಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಚಪ್ಪಲಿಯಿಂದ ಹೊಡೆಸಿಕೊಂಡಿದ್ದ ರಫೀಕ್ ತನಗೆ ಅವಮಾನವಾಗಿದೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಆವಾಜ್ ಹಾಕಿದ್ದಾನೆ. ದ್ವೇಷದ ಜ್ವಾಲೆಯಲ್ಲಿ ಕುದಿಯುತ್ತಿದ್ದ ರಫೀಕ್ ಅಲೀಮಾ ಒಂಟಿಯಾಗಿ ಕೆಲಸಕ್ಕೆ ಹೋಗುವ ಸಂಧರ್ಭದಲ್ಲಿ ಚಾಕು ಇರಿದುಕೊಂದಿದ್ದಾನೆ..
ಇನ್ನು ಕೊಲೆ ಮಾಡುವ ಪ್ಲಾನ್ ಮೊದಲೇ ಹೊಂದಿದ್ದ ರಫೀಕ್, ಮೂರು ದಿನದ ಹಿಂದೆಯೇ ಮನೆ ಖಾಲಿ ಮಾಡಿರೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಅಲೀಮಾಳನ್ನು ಕೊಂದ ರಫೀಕ್ ಎಸ್ಕೇಪ್ ಆಗಿದ್ದಾನೆ. ಹೆಚ್ಎಎಲ್ ಪೊಲೀಸ್ರು ಆರೋಪಿ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿದ್ದು, ಕೊಲ್ಕತ್ತಾಗೆ ಒಂದು ಟೀಂ ಹೊರಟಿದೆ.