ಗೋಹತ್ಯೆ ನಿಷೇಧ ಕಾಯಿದೆ ಜಾರಿ, ಹೋರಿ ಕರುಗಳ ಕೇಳೋರಿಲ್ಲ; ​ಸಾಕಲಾಗದೇ ಅರಣ್ಯಕ್ಕೆ ಬಿಡುತ್ತಿರುವ ಜನ!

ಹೈಲೈಟ್ಸ್‌:

  • ಗೋಹತ್ಯೆ ನಿಷೇಧ ಕಾಯಿದೆ ಜಾರಿ, ಹೋರಿಕರುಗಳನ್ನು ಕೇಳೋರಿಲ್ಲ; ಜಾನುವಾರು ಸಾಕಾಣೆದಾರರಿಗೆ ಸಂಕಷ್ಟ
  • ಸಾಕಲಾಗದೇ ಗವಿರಂಗನಾಥ ದೇಗುಲದ ಬಳಿಯ ಅರಣ್ಯಕ್ಕೆ ಬಿಡುತ್ತಿರುವ ಮಂದಿ
  • ಹಾಲು-ಮೇವು ಇಲ್ಲದೆ ನರಳಾಡುವ ಕರುಗಳು ಚಿರತೆಗಳಿಗೆ ಬಲಿ!

ಮಂಡ್ಯ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಳಿಕ ಜಾನುವಾರು ಸಾಕಣೆದಾರರು ತಮ್ಮ ಮಿಶ್ರತಳಿ ಹಸುಗಳು ಜನ್ಮ ನೀಡಿದ ಗಂಡು ಕರುಗಳನ್ನು ಏನು ಮಾಡಬೇಕು ಎಂದು ತೋಚದೆ ಚಿಂತೆಯಲ್ಲಿದ್ದಾರೆ. ಗಂಡು ಕರುಗಳನ್ನು ಸಾಕಲಾಗದ ಸ್ಥಿತಿಯಲ್ಲಿರುವ ಕೆಲವು ಮಂದಿ ಅವುಗಳನ್ನು ಬೆಟ್ಟ-ಗುಡ್ಡ ಅಥವಾ ಕಾಡಿನಂತಹ ಪ್ರದೇಶಕ್ಕೆ ಬಿಡುತ್ತಿರುವುದು ಕಂಡು ಬಂದಿದೆ.

ಜನಿಸಿ ಕೆಲವೇ ದಿನಗಳಾಗಿರುವ ಮಿಶ್ರತಳಿ ಹಸುವಿನ ಗಂಡು ಕರುಗಳನ್ನು ರೈತರು ರಾತ್ರಿ ವೇಳೆಯಲ್ಲಿ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಬಳಿ ಇರುವ ಗೋಶಾಲೆ ಸಮೀಪ, ಕೆ.ಆರ್‌.ಪೇಟೆ ತಾಲೂಕಿನ ಗವಿರಂಗನಾಥಸ್ವಾಮಿ ದೇಗುಲದ ಬಳಿಯ ಅರಣ್ಯ ಪ್ರದೇಶ ಹಾಗೂ ಬೆಟ್ಟದ ತಪ್ಪಲಿನಲ್ಲಿ ಕೆಲವರು ಗಂಡು ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಪರಿಣಾಮ ಈ ಕರುಗಳು ಹಾಲು-ಮೇವು ಇಲ್ಲದೆ ನರಳಾಡುವಂಥ ಸ್ಥಿತಿಯಿದೆ. ಕೆಲವು ಮೃತಪಟ್ಟಿವೆ. ಇನ್ನು ಕೆಲವು ಚಿರತೆಗಳಿಗೆ ಬಲಿಯಾಗಿವೆ ಎನ್ನಲಾಗಿದೆ.

ಹರಕೆ ಕರು ಬಿಡುವ ಸಂಪ್ರದಾಯ

ಹಾಗೆ ನೋಡಿದರೆ ಶ್ರೀ ಗವಿರಂಗನಾಥಸ್ವಾಮಿಗೆ ಹರಕೆ ಕರುಗಳನ್ನು ಬಿಡುವ ಸಂಪ್ರದಾಯ ಹೊಸದೇನೂ ಅಲ್ಲ. ಸಾಮಾನ್ಯವಾಗಿ ಹಳ್ಳಿಕಾರ್‌ ತಳಿಯ ಗಂಡು ಕರುಗಳನ್ನು ಹರಕೆ ಬಿಡಲಾಗುತ್ತಿತ್ತು. ಇವು ಬಸಪ್ಪನೆಂದೇ ಪೂಜಿಸಲ್ಪಡುತ್ತಿದ್ದರು. ಅವುಗಳಿಗೆ ಜನರು ಸಹ ಹುಲ್ಲು, ಬಾಳೆಹಣ್ಣು ಮತ್ತಿತರ ಆಹಾರ ಪದಾರ್ಥಗಳನ್ನು ನೀಡಿ, ಕೈ ಮುಗಿಯುತ್ತಿದ್ದರು.

ಆದರೆ, ಗೋಹತ್ಯೆ ನಿಷೇಧದ ಬಳಿಕ ಈ ಹರಕೆ ಹೆಸರಿನಲ್ಲಿ ಮಿಶ್ರ ತಳಿ ಹಸುವಿನ ಗಂಡು ಕರುಗಳನ್ನು ದೇವಾಲಯ ಬಳಿ ಬಿಡುವುದು ಹೆಚ್ಚಾಗಿದೆ. ಹೆಣ್ಣು ಕರು ಜನಿಸಿದರೆ ಆರೈಕೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವು ಹಾಲು ಕೊಡಲಿದೆ ಎಂದು ಜನರು ಸಾಕುತ್ತಾರೆ. ಆದರೆ, ಗಂಡು ಕರು ಜನಿಸಿದರೆ ಸಾಕಿ ಆರ್ಥಿಕ ನಷ್ಟ ಮಾಡಿಕೊಳ್ಳಲು ರೈತರು ಇಚ್ಛಿಸುವುದಿಲ್ಲ. ಇದರಿಂದ ಹುಟ್ಟಿದ ತಕ್ಷಣ ಮಾರಾಟ ಮಾಡಿಬಿಡುತ್ತಿದ್ದರು. ಆದರೆ, ಗೋಹತ್ಯೆ ನಿಷೇಧದಿಂದ ಮಾರಾಟ ಮಾಡಲು ಆಗದೆ, ಇತ್ತ ಸಾಕಲೂ ಆಗದೆ ತೊಂದರೆ ಎದುರಿಸುವಂತಗಿದೆ.

ನಾಟಿ ಹಸು ಗಂಡು ಕರುವಿಗಿದೆ ಬೇಡಿಕೆ
ನಾಟಿ ಹಸು ಅಥವಾ ಹಳ್ಳೀಕಾರ್‌ ತಳಿಯ ಹಸುಗಳು ಗಂಡು ಅಥವಾ ಹೆಣ್ಣು ಯಾವುದೇ ಕರುಗಳನ್ನು ಸಾಕಿದರೆ ರೈತರು ಖುಷಿಗೊಳ್ಳುತ್ತಾರೆ. ಅದರಲ್ಲೂ ಗಂಡು ಕರು ಹಾಕಿದರೆ ಆ ಖುಷಿ ದುಪ್ಪಟ್ಟಾಗುತ್ತದೆ. ಸಾಮಾನ್ಯವಾಗಿ ನಾಟಿ ಹಸುವಿನ ಕರುಗಳನ್ನು ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಶೋಕಿಗೆ ಸಾಕುವವ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ನಾಟಿ ಹಸುವಿನ ಗಂಡು ಕರುಗಳಿಗೆ ಸಹಸ್ರ ಸಹಸ್ರ ಬೆಲೆಯಿದೆ.

ಗೋಶಾಲೆ ತೆರೆಯಲು ಆಗ್ರಹ
ರಾತ್ರೋರಾತ್ರಿ ರೈತರು ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಕರುಗಳು ಪೋಷಣೆ ಸಿಗದೆ ನರಳಾಡುತ್ತಿವೆ. ಹೀಗಾಗಿ ಸರಕಾರ ಕೂಡಲೇ ಇಲ್ಲಿ ಗೋಶಾಲೆ ತೆರೆದು ಅನಾಥ ಕರುಗಳ ಪೋಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್‌.ಪೇಟೆಯ ಹೆತ್ತಗೋನಹಳ್ಳಿಯ ಎಚ್‌.ಜೆ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಗೋಶಾಲೆಗೆ ಬಿಡುವಂತೆ ಸಚಿವಪ್ರಭು ಚೌಹಾಣ್‌ ಸೂಚಿಸಿದ್ದರು
ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ 15 ದಿನಗಳ ಹಿಂದಷ್ಟೇ ನಗರದಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಪ್ರಭು ಚೌಹಾಣ್‌ ಅವರು, ದೊಡ್ಡಬ್ಯಾಡರಹಳ್ಳಿ ಸಮೀಪದ ಚೈತ್ರ ಗೋಶಾಲೆಗೂ ಭೇಟಿ ನೀಡಿದ್ದರು. ಈ ವೇಳೆ ರೈತರು ಕನಿಷ್ಠ ಮೂರು ತಿಂಗಳವರೆಗೆ ಗಂಡು ಕರುಗಳನ್ನು ಸಾಕಿ ಗೋಶಾಲೆಗಳಿಗೆ ಬಿಡುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದ್ದರು.

ಶ್ರೀಗವಿರಂಗನಾಥಸ್ವಾಮಿ ದೇವಾಲಯದ ಬಳಿ ರೈತರು ಮಿಶ್ರತಳಿಯ ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದು ಗೊತ್ತಾಗಿದೆ. ಯಾರು ಬಿಡುತ್ತಿದ್ದಾರೆಂಬುದು ಗೊತ್ತಿಲ್ಲ. ಪುಟ್ಟ ಕರುಗಳನ್ನು ಹೀಗೆ ಕಾಡಿಗೆ ಬಿಡುವುದು ಸರಿಯಲ್ಲ. ಸ್ವಲ್ಪಮಟ್ಟಿಗೆ ಬೆಳೆಸಿ ತಂದು ಬಿಟ್ಟರೆ ಯಾರಾದರೂ ಸಾಕಿಕೊಳ್ಳುತ್ತಾರೆ. ಜತೆಗೆ, ಭಾಗದಲ್ಲಿ ಗೋಶಾಲೆ ತೆರೆಯುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು. ಈ ಬಗ್ಗೆ ಆದಿಚುಂಚನಗಿರಿಯ ಸ್ವಾಮೀಜಿ ಅವರೊಂದಿಗೂ ಮಾತನಾಡಲಾಗುವುದು.
ಕೆ.ಸಿ.ನಾರಾಯಣಗೌಡ, ಜಿಲ್ಲಾಉಸ್ತುವಾರಿ ಸಚಿವ

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *