ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್; ಸಚಿವರ ರಾಸಲೀಲೆ ವಿಡಿಯೋ ವಿರುದ್ಧ ದೂರು
ಬೆಂಗಳೂರು (ಮಾ. 2): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸ್ಫೋಟಗೊಂಡಿದೆ. ಪ್ರಭಾವಿ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸರ್ಕಾರ ಪ್ರಭಾವಿ ಸಚಿವರೊಬ್ಬರು ಮಹಿಳೆಯೊಂದಿಗಿನ ಸಂಬಂಧವನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ. ಅವರ ರಾಸಲೀಲೆಗಳಿರುವ ದೃಶ್ಯಗಳು ಸಿಡಿಯಲ್ಲಿ ದಾಖಲಾಗಿದ್ದು, ಸಂತ್ರಸ್ತೆ ಪರ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಈ ವೇಳೆ ಯಾವ ಸಚಿವರು ಎಂಬ ಕುತೂಹಲ ಎಲ್ಲಡೆ ಮೂಡಿದ್ದು ಇದಕ್ಕೆ ಉತ್ತರಿಸಿದ ದಿನೇಶ್ ಕಲ್ಲಹಳ್ಳಿ, ಹೆಸರನ್ನು ಬಹಿರಂಗ ಪಡಿಸಲು ಈಗ ಸಾಧ್ಯವಿಲ್ಲ. ಸಂತ್ರಸ್ಥೆಗೆ ಭಯದ ವಾತಾವರಣ ಇದೆ. ಹಾಗಾಗಿ ಆಕೆ ಮಾಧ್ಯಮದ ಮುಂದೆ ಬರುತ್ತಿಲ್ಲ. ದೂರು ಕೊಟ್ಟ ಬಳಿಕ ಎಲ್ಲವನ್ನು ಹೇಳುತ್ತೇನೆ ಎಂದಿದ್ದಾರೆ.
ಸಚಿವರ ದೌರ್ಜನ್ಯದ ಬಗ್ಗೆ ಸಂತ್ರಸ್ತರು ಮತ್ತು ಕುಟುಂಬಸ್ಥರು ನನ್ನ ಮುಂದೆ ವಿಷಯ ಪ್ರಸ್ತಾಪಿಸಿ, ನೋವು ತೋಡಿಕೊಂಡರು. ಅವರ ಬಳಿ ವಿಡಿಯೋ ಸೇರಿದಂತೆ ಎಲ್ಲ ದಾಖಲೆಗಳು ಇವೆ. ಸಂತ್ರಸ್ತೆ ನ್ಯಾಯಕ್ಕಾಗಿ ವಕೀಲರ ಸಲಹೆಯಂತೆ ದೂರು ನೀಡಿದ್ದೇನೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಲಿ ಎಂದರು.