ನಾನು ತಪ್ಪೇ ಮಾಡಿಲ್ಲ, ರಾಜೀನಾಮೆ ಏಕೆ ಕೊಡಲಿ?: ಜಾರಕಿಹೊಳಿ ಮೊದಲ ಪ್ರತಿಕ್ರಿಯೆ
ರಾಸಲೀಲೆ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಜತೆಗೆ ತಾವು ತಪ್ಪು ಮಾಡಿಲ್ಲ, ಏಕೆ ರಾಜೀನಾಮೆ ನೀಡಲಿ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾದ ದೂರಿನ ಕುರಿತು ಬೆಂಗಳೂರಿನಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ರಮೇಶ ಜಾರಕಿಹೊಳಿ, ಈ ಸಿ.ಡಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಮಂತ್ರಿ ಮಾತ್ರವಲ್ಲ, ಎಂಎಲ್ಸಿ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡುತ್ತೇನೆ. ಆದರೆ ಇದರಲ್ಲಿ ನಾನು ಯಾವುದೇ ತಪ್ಪಿಲ್ಲ. ಆ ಯುವತಿ ಯಾರು ಎಂದು ನನಗೆ ಗೊತ್ತಿಲ್ಲ. ದಿನೇಶ ಕಲ್ಲಹಳ್ಳಿ ಯಾರೋ ಗೊತ್ತಿಲ್ಲ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.
‘ನಾನು ತಪ್ಪಿತಸ್ಥ ಎಂದು ದೃಢಪಟ್ಟರೆ ಮಾತ್ರ ರಾಜೀನಾಮೆ ಕೊಡುತ್ತೇನೆ. ದೈವದ ಮೇಲೆ ನನಗೆ ನಂಬಿಕೆ ಇದೆ. ದೇವರ ಸಾಕ್ಷಿಯಾಗಿ ಹೇಳುತ್ತೇನೆ. ಆ ಯುವತಿ ಬಗ್ಗೆ ನನಗೆ ಗೊತ್ತಿಲ್ಲ. ಏನಾದರೂ ತಪ್ಪು ಮಾಡಿದ್ರೆ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.
ನಾನು ಮೈಸೂರಿನಲ್ಲಿದ್ದೆ. ಮಾಧ್ಯಮದಲ್ಲಿ ಸುದ್ದಿ ತಿಳಿದು ಆಘಾತವಾಯಿತು. ಈ ಸಿ.ಡಿ. ಶೇಕಡ ನೂರರಷ್ಟು ನಕಲಿ. ಈ ಸಿ.ಡಿ. ಸ್ಫೋಟ ಎಲ್ಲ ರಾಜಕೀಯ ಗಿಮಿಕ್. ನನಗೆ ಸಿಡಿ ರಾಜಕೀಯದ ಬಗ್ಗೆ ಗೊತ್ತಿಲ್ಲ. ಇದರ ಬಗ್ಗೆ ಸಮಗ್ರ ತನಿಖೆ ಆಗಲಿ. ತಪ್ಪೇ ಮಾಡದ ನಾನೇಕೆ ರಾಜೀನಾಮೆ ನೀಡಲಿ? ಎಂದಿದ್ದಾರೆ.
ಎಲ್ಲ ಮಾಧ್ಯಮಗಳಿಗೂ ಒಂದೇ ಉತ್ತರ. ನೂರಕ್ಕೆ ನೂರರಷ್ಟು ಇದು ರಾಜಕೀಯ ಷಡ್ಯಂತ್ರ. ನಮ್ಮ ಕುಟುಂಬದ ಮೇಲೆ ಬಂದ ಕಳಂಕ. ಇದನ್ನು ಎದುರಿಸುತ್ತೇನೆ. ರಾಜಕೀಯ ವಿರೋಧಿಗಳು ಮಾಡಿರುವ ಸಂಚು. ನನಗೂ ಈ ಬಗ್ಗೆ ಪ್ರಶ್ನೆಗಳಿವೆ. ಸಮಗ್ರ ತನಿಖೆಯಾಗಲಿ. ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.