ರಾಜ್ಯಕ್ಕೆ ಮತ್ತೊಂದು ಪಶು ವಿವಿ ಬೇಡ- ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯ
ರಾಜ್ಯದ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ಪಶು ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಿರುವ ಮಾಹಿತಿ ಇದ್ದು ಸರ್ಕಾರದ ಈ ನಿರ್ಧಾರದಿಂದಾಗಿ ಬೀದರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವಿವಿ ಯನ್ನು ಕಡೆಗಣಿಸಿದಂತಾಗುತ್ತದೆ. ಹಾಗಾಗಿ ಸರ್ಕಾರ ಈ ಕೂಡಲೇ ತನ್ನ ತೀರ್ಮಾನ ಕೈಬಿಡುವಂತೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ಹಾಗೂ ಪಶುಸಂಗೋಪನೆ ಸಚಿವರಾದ ಶ್ರೀ ಪ್ರಭು ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಶ್ರೀ ಪ್ರಿಯಾಂಕ್ ಖರ್ಗೆ ಅವರು ನಂಜುಂಡಪ್ಪ ವರದಿ ಆಧರಿಸಿ 2005 ರಲ್ಲಿ ಬೀದರ ನಲ್ಲಿ ಸ್ಥಾಪಿಸಿರುವ ಪಶು ವಿವಿಯಲ್ಲಿ ಪ್ರತಿವರ್ಷ ಸುಮಾರು 800 ವಿದ್ಯಾರ್ಥಿಗಳು ಪಶುವೈದ್ಯ ಹಾಗೂ ಪಾಲಿಟೆಕ್ನಿಕ್ ನ ವಿವಿಧ ಕೋರ್ಸ್ಗಳ ಅಧ್ಯಯನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸದರಿ ಪಶು ವಿವಿ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು ಏಳು ಪಶುವೈದ್ಯಕೀಯ ಕಾಲೇಜು, ಎರಡು ಹೈನುಗಾರಿಕೆ ವಿಜ್ಞಾನ ಕಾಲೇಜು, ಮೀನುಗಾರಿಕೆ ಕಾಲೇಜು ಹಾಗೂ 10 ವಿವಿಧ ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಶಿವಮೊಗ್ಗಾದಲ್ಲಿ ಮತ್ತೊಂದು ಪಶುವಿವಿ ಸ್ಥಾಪನೆಯಾದರೆ, ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗುತ್ತದೆ. ಅಲ್ಲದೇ ಕಳೆದ 10 ವರ್ಷಗಳಿಂದ ಕಾರ್ಯನಿರ್ಹಸುತ್ತಿರುವ ಬೀದರ್ ಪಶು ವಿವಿ ಇಬ್ಭಾಗವಾಗುವುದಲ್ಲದೇ, ವಿವಿ ಕಡೆಗಣಿಸಿದಂತಾಗುತ್ತದೆ. ಈಗಾಗಲೇ ಮೂಲಸೌಕರ್ಯ, ಆರ್ಥಿಕ ಸಂಕಷ್ಟ ಮತ್ತು ಖಾಲಿ ಹುದ್ದೆಗಳಿಂದ ಹಿಂದುಳಿದಿರುವ ಬೀದರ್ ಪಶು ವಿವಿ ಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಕಲಂ 371 J ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಗಳ ಅಭಿವೃದ್ದಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕೇ ಹೊರತು ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಬಲಹೀನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬಾರದು. ಈಗಾಗಲೇ ಮಂಜುರಾಗಿದ್ದ ಪ್ರಮುಖ ಯೋಜನೆಗಳು ಕಕ ಭಾಗದಿಂದ ರಾಜ್ಯದ ಬೇರೆ ಭಾಗಗಳಿಗೆ ವರ್ಗಾವಣೆಗೊಂಡಿವೆ. ಈಗ ಶಿವಮೊಗ್ಗಾದಲ್ಲಿ ಪಶು ವಿವಿ ಸ್ಥಾಪನೆ ಮಾಡಿದರೆ ಈ ಭಾಗದ ಜನರಿಗೆ ದ್ರೋಹವೆಸಗಿದಂತಾಗುತ್ತದೆ. ಹಾಗಾಗಿ ರಾಜ್ಯದ ಏಕೈಕ ಪಶು ವಿವಿಯನ್ನು ಬೀದರ್ನಲ್ಲಿಯೇ ಮುಂದುವರೆಸಿ ರಾಜ್ಯದ ಬೇರೆ ಕಡೆ ಮತ್ತೊಂದು ಪಶು ವಿವಿ ಮಂಜೂರು ಮಾಡಬಾರದೆಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ಶಾಸಕರು ಆಗ್ರಹಿಸಿದ್ದಾರೆ.