ಕ್ರೀಡಾ ಗ್ರಾಮ ಅಭಿವೃದ್ಧಿಪಡಿಸಲು ಮಂಡಳಿಯಿಂದ ಚಿಂತನೆ-ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ.ಮಾರ್ಚ್.3.(ಕ.ವಾ)-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರೀಡಾ ಗ್ರಾಮ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ ಎಂದು ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮಂಡಳಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಅನುಷ್ಠಾನ ಏಜೆನ್ಸಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಇದಲ್ಲದೆ ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣ ಮತ್ತು ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆಗೂ ಮಂಡಳಿ ಯೋಜಿಸುತ್ತಿದೆ ಎಂದರು.

ಪ್ರಸಕ್ತ 2020-21ನೇ ಸಾಲಿಗೆ ರಾಜ್ಯ ಸರ್ಕಾರ ಮಂಡಳಿಗೆ 1152 ಕೋಟಿ ರೂ. ಅನುದಾನವನ್ನು ನಿಗದಿಪಡಿಸಿದೆ. ಇದರಲ್ಲಿ ಈಗಾಗಲೆ ಶೇ.75ರಷ್ಟು ಹಣವನ್ನು ಬಳಕೆ ಮಾಡಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ 4-5 ವರ್ಷದಲ್ಲಿ ಸರ್ಕಾರಕ್ಕೆ 4ನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇದೇ ಮೊದಲಾಗಿದ್ದು, ನಮ್ಮ ಅವಧಿಯಲ್ಲಿ ಮಂಡಳಿಯ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಿರುವುದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ಕಲಬುರಗಿ ನಗರದಲ್ಲಿ 24 ಗಂಟೆ ನಿರಂತರ ಕುಡಿಯುವ ನೀರು ಯೋಜನೆ ಮತ್ತು ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಏಕಕಾಲದಲ್ಲಿ ಒಳಚರಂಡಿ ಕಾಮಗಾರಿಗಳು ಕೈಗೊಳ್ಳಬೇಕು ಎಂದು ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳನ್ನು ಪ್ರಥಮಾದ್ಯತೆ ಮೇಲೆ ಅನುಷ್ಠಾನಗೊಳಿಸಬೇಕು. ಹಿಂದುಳಿದ ಹಣೆಪಟ್ಟಿ ತೊಲಗಿಸಲು 371ಜೆ ಅನ್ವಯ ರಚನೆಗೊಂಡಿರುವ ಮಂಡಳಿಗೆ ರಾಜ್ಯ ಸರ್ಕಾರ ಕೋವಿಡ್ ಲಾಕ್ ಡೌನ್ ನಡುವೆಯೂ ಅನುದಾನ ನೀಡಿದೆ. ಹೀಗಾಗಿ ಅಧಿಕಾರಿಗಳು ಇದನ್ನರಿತು ಕಾಮಗಾರಿಗಳನ್ನು ಬೇಗ ಅನುಷ್ಠಾನಗೊಳಿಸಿ ಜನ ಸೇವೆಗೆ ನೀಡಬೇಕು ಎಂದರು.

ಕಾಮಗಾರಿ ಅನುಷ್ಠಾನದಲ್ಲಿ ಅಸಡ್ಡೆ ಯಾಕೆ: ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆಯಲ್ಲಿ 4-5 ವರ್ಷದ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು ಅನುಷ್ಠಾನದಲ್ಲಿ ಅಸಡ್ಡೆ ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಹುತೇಕರು ಸ್ಥಳೀಯ ಅಧಿಕಾರಿಗಳೆ ಇಲ್ಲಿದ್ದೀರಿ. ಹೀಗಿದ್ದ ಮೇಲೆ ಈ ಭಾಗದ ಅಭಿವೃದ್ಧಿಗೆ ನೀವು ಸಹಕರಿಸಬೇಕಲವೆ ಎಂದ ಅವರು ನೀವು ನಿರ್ಲಕ್ಷ್ಯ ಮಾಡಿದಲ್ಲಿ ಈ ಭಾಗಕ್ಕೆ ಅನ್ಯಾಯ ಮಾಡದಂತಾಗುತ್ತದೆ ಎಂದು ಬೆಸರದಿಂದ ನುಡಿದರು.

ವಿಶೇಷ ಘಟಕ ಯೋಜನೆಗೆಳಿಗೆ ಪ್ರಥಮಾದ್ಯತೆ ಕೊಡಿ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಶ್ರೇಯೋಭಿವೃದ್ಧಿಗೆ ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆಯಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ಪ್ರಥಮಾದ್ಯತೆ ನೀಡಬೇಕು. ಆಯಾ ವರ್ಷದಲ್ಲಿ ಆರ್ಥಿಕ ಪ್ರಗತಿ ಸಾಧಿಸದೆ ಇದ್ದಲ್ಲಿ ಕಾಯ್ದೆಯನ್ವಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ದತ್ತಾತ್ರೇಯ ಪಾಟೀಲ ರೇವೂರ ಅವರು ಎಚ್ಚರಿಕೆ ನೀಡಿದರು.

ಮಂಡಳಿಯ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ ಮಾತನಾಡಿ ಕೋವಿಡ್ ಕಾರಣ ತಡವಾಗಿ ಕ್ರಿಯಾ ಯೋಜನೆ ಅನುಮೋದನೆಗೊಂಡ 2020-21ನೇ ಸಾಲಿನ ಕಾಮಗಾರಿಗಳು ಮಾರ್ಚ್ 31 ರೊಳಗೆ ಆರಂಭಿಸಬೇಕು. 2021-22ನೇ ಸಾಲಿನ ಕ್ರಿಯಾ ಯೋಜನೆಯನ್ನು ಏಪ್ರಿಲ್ 30 ರೊಳಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಡಳಿ ನಿರ್ಧರಿಸಿರುವುದರಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮಂಡಳಿಗೆ ಬೇಗ ಸಲ್ಲಿಸಬೇಕು. 4-5 ವರ್ಷಗಳ ಸುಮಾರು 10 ಕೋಟಿ ರೂ. ವೆಚ್ಚದ 91 ಕಾಮಗಾರಿಗಳು ಭೌತಿಕ ಮುಗಿದಿದ್ದರು ಸಹ ಇದೂವರೆಗೆ ಆರ್ಥಿಕ ಪ್ರಗತಿ ಸಾಧಿಸದಿದ್ದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಅವರು ಮಾರ್ಚ್ 31ರೊಳಗೆ ಇಂತಹ ಕಾಮಗಾರಿಗಳ ಬಿಲ್ಲು ಪಾವತಿ ಮಾಡಿ ಆರ್ಥಿಕ ಸಾಧನೆ ತೋರಿಸಿ ಎಂದು ಅಧಿಕಾರಿಗಳಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮತನಾಡಿ ಜಿಲ್ಲೆಯ ಲೊಕೋಪಯೋಗಿ, ಗ್ರಾಮೀಣ ಕುಡಿಯುವ ನೀರು. ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಅನುಷ್ಟಾನ ಏಜೆನ್ಸಿಗಳು, ಕಾಮಗಾರಿಗೆ ಹಂಚಿಕೆಯಾದ ಅನುದಾನದ ಪೈಕಿ ಕಡಿಮೆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು ಬಹಳಷ್ಟು ಉದಾಹಣೆಗಳಿದ್ದು, ಇಂತಹ ಪ್ರಕರಣಗಳಲ್ಲಿ ಖರ್ಚಾಗದೆ ಉಳಿದ ಅನುದಾನವನ್ನು ಮಂಡಳಿಗೆ ವಾಪಸ್ಸು ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿವಿಧ ಇಲಾಖೆಯಿಂದ ಜಾರಿಯಾಗುತ್ತಿರುವ ಮಂಡಳಿಯ ಕಾಮಗಾರಿಗಳು ಪ್ರತ್ಯೇಕವಾಗಿ ಅಧ್ಯಕ್ಷರು ಪ್ರಗತಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಶಾಸಕರಾದ ಎಂ.ವೈ.ಪಾಟೀಲ, ಸುಭಾಷ ಗುತ್ತೇದಾರ, ಖನೀಜ್ ಫಾತಿಮಾ, ಜಿಲ್ಲಾ ಪಂಚಾಯತ್ ಸಿ.ಇ.ಒ. ಡಾ.ದಿಲೀಶ್ ಸಾಸಿ, ಡಿಸಿಪಿ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇರದಂತೆ ವಿವಿಧÀ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *