ಇಂದಿನಿಂದ ಬಜೆಟ್ ಅಧಿವೇಶನ ಆರಂಭ…! ವಾಕ್ಸಮರಕ್ಕೆ ಸಜ್ಜಾದ ವೇದಿಕೆ
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲ 2 ದಿನಗಳ ಕಾಲ ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಚರ್ಚೆಗೆ ಸಾಕ್ಷಿಯಾಗಲಿದೆ. ಚರ್ಚೆಯ ನಂತರ ಎರಡೂ ಸದನಗಳ ಅಭಿಪ್ರಾಯವನ್ನ ನವದೆಹಲಿಗೆ ರವಾನಿಸಲಾಗುವುದು. ಮಾರ್ಚ್ 8 ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ.
ಇಂದಿನಿಂದ ಮಾರ್ಚ್ 31 ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ರಮೇಶ್ ಜಾರಕಿಹೊಳಿ ಸಿ.ಡಿ. ವಿವಾದ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಕ್ರಮ ಗಣಿಗಾರಿಕೆ, ಮೀಸಲಾತಿ ಹೋರಾಟದ ವಿಚಾರಗಳು ಸದ್ದು ಮಾಡುವ ನಿರೀಕ್ಷೆಯಿದೆ.
ಬಜೆಟ್ ಅಧಿವೇಶನದ ಕುರಿತು ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾರ್ಚ್ 4 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ 2 ದಿನ ಒಂದು ದೇಶ, ಒಂದು ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ 8 ರಂದು ಬಜೆಟ್ ಮಂಡನೆಯಾಗಲಿದೆ. ನಂತರ ಮಾರ್ಚ್ 31 ರವರೆಗೆ ಬಜೆಟ್ ಮೇಲಿನ ಚರ್ಚೆ, ಸರ್ಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ ಎಂದು ಹೇಳಿದ್ದಾರೆ.
ಇನ್ನು ಮಾ.31ರವರೆಗೆ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.