ಸಿಹಿ ಸುದ್ದಿ ನೀಡಿದ ಶ್ರೇಯಾ ಘೋಷಾಲ್: ಮರಿ ಕೋಗಿಲೆಯ ನಿರೀಕ್ಷೆಯಲ್ಲಿ ‘ಶ್ರೇಯಾದಿತ್ಯ’

ಹೈಲೈಟ್ಸ್‌:

  • ಸೂಪರ್ ಸ್ವೀಟ್ ನ್ಯೂಸ್ ನೀಡಿದ ಗಾಯಕಿ ಶ್ರೇಯಾ ಘೋಷಾಲ್
  • ಗರ್ಭಿಣಿ ಆಗಿದ್ದಾರೆ ಗಾಯಕಿ ಶ್ರೇಯಾ ಘೋಷಾಲ್
  • ಮರಿ ಕೋಗಿಲೆಯ ನಿರೀಕ್ಷೆಯಲ್ಲಿ ಶ್ರೇಯಾ-ಶಿಲಾದಿತ್ಯ ದಂಪತಿ

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಸಿಹಿ ಸುದ್ದಿ ನೀಡಿದ್ದಾರೆ. ಆರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶ್ರೇಯಾ ಘೋಷಾಲ್ ಗರ್ಭಿಣಿ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಶ್ರೇಯಾ ಘೋಷಾಲ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಬಹಿರಂಗ ಪಡಿಸಿದ್ದಾರೆ.

ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲರ ಪ್ರೀತಿ ಮತ್ತು ಆಶೀರ್ವಾದ ‘ಬೇಬಿ ಶ್ರೇಯಾದಿತ್ಯ’ಗೆ ಇರಲಿ ಎಂದು ಶ್ರೇಯಾ ಘೋಷಾಲ್ ಕೇಳಿಕೊಂಡಿದ್ದಾರೆ.

”ಬೇಬಿ ಶ್ರೇಯಾದಿತ್ಯ’ ನಿರೀಕ್ಷೆಯಲ್ಲಿದ್ದೇವೆ. ಈ ಸುದ್ದಿಯನ್ನು ನಿಮಗೆಲ್ಲ ತಿಳಿಸಲು ಶಿಲಾದಿತ್ಯ ಮತ್ತು ನಾನು ತುಂಬಾ ಥ್ರಿಲ್ ಆಗಿದ್ದೇವೆ. ಬದುಕಿನ ಹೊಸ ಪುಟಕ್ಕೆ ನಾಂದಿ ಹಾಡುತ್ತಿರುವ ನಮಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಇರಲಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ. ಜೊತೆಗೆ ಶ್ರೇಯಾ ಘೋಷಾಲ್ ತಮ್ಮ ಫೋಟೋವೊಂದನ್ನೂ ಹಾಕಿಕೊಂಡಿದ್ದಾರೆ. ಆ ಫೋಟೋದಲ್ಲಿ ಶ್ರೇಯಾ ಘೋಷಾಲ್ ಮೊಗದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದೆ.

ಸೂಪರ್ ಸ್ವೀಟ್ ನ್ಯೂಸ್ ನೀಡಿರುವ ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸೆಲೆಬ್ರಿಟಿಗಳು, ತಾರೆಯರು, ಗಾಯಕರು, ಸಂಗೀತ ನಿರ್ದೇಶಕರುಗಳು ಶ್ರೇಯಾ ಘೋಷಾಲ್ ಗೆ ಶುಭ ಹಾರೈಸಿದ್ದಾರೆ.
ಅಂದ್ಹಾಗೆ, ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾಯ 2015 ರ ಫೆಬ್ರವರಿ ತಿಂಗಳಲ್ಲಿ. ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆಯಿತು. ಅಷ್ಟಕ್ಕೂ, ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು.

ಶ್ರೇಯಾ ಘೋಷಾಲ್ ಬಾಲಿವುಡ್ ನಲ್ಲಿ ಮಾತ್ರ ಫೇಮಸ್ ಅಲ್ಲ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿರುವ ಶ್ರೇಯಾ ಘೋಷಾಲ್ ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಯ ಚಲನಚಿತ್ರಗಳಲ್ಲಿ ಹಾಡು ಹಾಡಿದ್ದಾರೆ. ಕನ್ನಡದಲ್ಲಂತೂ ಹಲವು ಸೂಪರ್ ಹಿಟ್ ಗೀತೆಗಳನ್ನು ಶ್ರೇಯಾ ಘೋಷಾಲ್ ನೀಡಿದ್ದಾರೆ. ಏನೋ ಒಂಥರಾ.. ಏನೋ ಒಂಥರಾ.., ಉಲ್ಲಾಸದ ಹೂಮಳೆ.., ಓ ಗುಣವಂತ.. ನೀನೆಂದು ನನ್ನ ಸ್ವಂತ.., ಆಹಾ ಎಂಥ ಆ ಕ್ಷಣ.., ತನ್ಮಯಳಾದೆನು ತಿಳಿಯುವ ಮುನ್ನವೇ.., ಸವಿಯೋ ಸವಿಯೋ ಒಲವ ನೆನಪು.. ಮುಂತಾದ ಹಲವು ಕನ್ನಡ ಗೀತೆಗಳಿಗೆ ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *