ಈ ಯುವ ವೇಗಿಯನ್ನು ಎದುರಿಸುವುದು ಭಯಾನಕ ಕಷ್ಟವೆಂದ ಮ್ಯಾಕ್ಸ್‌ವೆಲ್‌!

ಹೈಲೈಟ್ಸ್‌:

  • ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿ.
  • ನ್ಯೂಜಿಲೆಂಡ್ ವಿರುದ್ಧ‌ ಮೂರನೇ ಪಂದ್ಯದಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಿಲೀ ಮೆರಿಡಿಥ್.
  • ರಿಲೀ ಮೆರೆಡಿಥ್‌ ಬೌಲಿಂಗ್‌ ಎದುರಿಸುವುದು ಭಯಾನಕ ಕಷ್ಟವೆಂದ ಗ್ಲೆನ್‌ ಮ್ಯಾಕ್ಸ್‌ವೆಲ್‌.

ಹೊಸದಿಲ್ಲಿ: ವಿಶ್ವದಾದ್ಯಂತ ಶ್ರೇಷ್ಠ ಬೌಲರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಇದೀಗ ತಮ್ಮದೇ ದೇಶದ ಯುವ ವೇಗಿ ರಿಲೀ ಮೆರೆಡಿಥ್ ಅವರ ಬೌಲಿಂಗ್‌ ಎದುರಿಸುವುದು ಭಯಾನಕ ಕಷ್ಟ ಎಂದು ಹೇಳಿಕೊಂಡಿದ್ದಾರೆ.

ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಬುಧವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ರಿಲೀ ಮೆರೆಡಿಥ್‌ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿಯೇ 24 ರನ್‌ ನೀಡಿ ಎರಡು ವಿಕೆಟ್‌ ಪಡೆದು ಎಲ್ಲರ ಗಮನ ಸೆಳೆದರು.

ನ್ಯೂಜಿಲೆಂಡ್‌ ತಂಡ 209 ರನ್‌ ಗುರಿ ಹಿಂಬಾಲಿಸುವ ವೇಳೆ ಟಿಮ್‌ ಸೀಫರ್ಟ್‌ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಮೆರೆಡಿಥ್‌ ತನ್ನ ಖಾತೆಗೆ ಹಾಕಿಕೊಂಡರು. ಅಂತಿಮವಾಗಿ ಅಸ್ಟನ್‌ ಅಗರ್‌(30ಕ್ಕೆ 6) ಸ್ಪಿನ್‌ ಮೋಡಿಗೆ ನಲುಗಿದ ಕಿವೀಸ್‌ 64 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 1-2 ಅಂತರದಲ್ಲಿ ಆಸ್ಟ್ರೇಲಿಯಾ ತಂಡ ಜೀವಂತವಾಗಿರಿಕೊಂಡಿತು.

ಯುವ ವೇಗಿ ರಿಲೀ ಮೆರೆಡಿತ್‌ ಅವರನ್ನು ಗುಣಗಾನ ಮಾಡಿದ ಮ್ಯಾಕ್ಸ್‌ವೆಲ್‌, ಅಭ್ಯಾಸ ಪಂದ್ಯದಲ್ಲಿ ಯುವ ವೇಗಿಯ ಬೌಲಿಂಗ್‌ನಲ್ಲಿ ಚೆಂಡು ತಗುಲಿಸಿಕೊಂಡ ಘಟನೆಯನ್ನು ಸ್ಮರಿಸಿಕೊಂಡರು.

“ರಿಲೀ ಮೆರಿಡಿತ್‌ ಅವರಲ್ಲಿ ವಿನೋದವಿಲ್ಲ. ನಾವಾಡಿದ್ದ ಅಭ್ಯಾಸ ಪಂದ್ಯದಲ್ಲಿ ಹಲವು ಬಾರಿ ಅವರ ಬೌಲಿಂಗ್‌ನಲ್ಲಿ ಚೆಂಡು ತಗುಲಿಸಿಕೊಂಡಿದ್ದೇನೆ. ಈ ವೇಳೆ ನಾನು ಅವರಿಗೆ ಒಂದು ಮಾತು ಹೇಳಿದ್ದೆ, ‘ದಯವಿಟ್ಟು, ಚೆಂಡನ್ನು ನನಗಿಂತ ಸ್ವಲ್ಪ ಹೊರಗಡೆ ಹಾಕಿ’ ಎಂದಿದ್ದೆ. ಏಕೆಂದರೆ, ನೆಟ್ಸ್ ಅಥವಾ ಅಭ್ಯಾಸ ಪಂದ್ಯ ಅಥವಾ ಪಂದ್ಯವಾಗಲಿ ಅವರ ಬೌಲಿಂಗ್‌ ಎದುರಿಸುವುದು ಭಯಾನಕ ಕಷ್ಟ,” ಎಂದು ಮ್ಯಾಕ್ಸ್‌ವೆಲ್‌ ಹೇಳಿದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಿಲೀ ಮೆರಿಡಿತ್‌ ಅವರನ್ನು ಪಂದ್ಯದಲ್ಲಿ ಅದ್ಭುತವಾಗಿ ಬಳಸಿಕೊಂಡ ನಾಯಕ ಆರೋನ್‌ ಫಿಂಚ್‌ ಅವರನ್ನು ಸಹ ಗ್ಲೆನ್‌ ಮ್ಯಾಕ್ಸ್‌ವೆಲ್‌ ಗುಣಗಾನ ಮಾಡಿದರು.

“ಮೆರಿಡಿಥ್‌ ಅವರಂತಹ ಬೌಲಿಂಗ್‌ ಅಸ್ತ್ರ ನಿಮ್ಮ ತಂಡದಲ್ಲಿದ್ದರೆ ಅವರನ್ನು ನಾಯಕ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ಅದರಂತೆ ನಮ್ಮ ನಾಯಕ ಆರೋನ್‌ ಫಿಂಚ್‌ ಯುವ ವೇಗಿಯನ್ನು ಚಾಣಾಕ್ಷತನದಿಂದ ಬಳಸಿಕೊಂಡಿದ್ದಾರೆ. ಅದರಂತೆ ತಂಡದ ಪ್ರಭಾವಿ ಬೌಲರ್ ಎಂಬುವುದನ್ನು ಮೆರಿಡಿಥ್‌ ಸಾಬೀತುಪಡಿಸಿದ್ದಾರೆ. ಅತಿ ವೇಗವಾಗಿ ಚೆಂಡನ್ನು ಸ್ವಿಂಗ್‌ ಮಾಡುವುದು ಅವರ ಸಾಮರ್ಥ್ಯವಾಗಿದೆ. ಒಮ್ಮೆ ಹೊಸ ಚೆಂಡು ಕೈಗೆತ್ತಿಕೊಂಡರೆ, ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸುತ್ತಾರೆ,” ಎಂದು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಹ ಆಟಗಾರನನ್ನು ಗುಣಗಾನ ಮಾಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *