ತಾಜ್‌ಮಹಲ್‌ಗೆ ಬಾಂಬ್ ಬೆದರಿಕೆ ಕರೆ: ಐತಿಹಾಸಿಕ ಕಟ್ಟಡ ತೊರೆಯುವಂತೆ ಪ್ರವಾಸಿಗರಿಗೆ ಸೂಚನೆ!
ಹೈಲೈಟ್ಸ್:
- ಐತಿಹಾಸಿಕ ತಾಜ್‌ಮಹಲ್‌ಗೆ ಅನಾಮಿಕನಿಂದ ಬಾಂಬ್ ಬೆದರಿಕೆ ಕರೆ.
- ತಾಜ್‌ಮಹಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ಅನಾಮಿಕ.
- ಆಗ್ರಾ ಪೊಲೀಸರಿಂದ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಗಾಗಿ ಶೋಧ ಕಾರ್ಯ ಆರಂಭ.
- ತಾಜ್‌ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುಪರ್ದಿಗೆ ಪಡೆದ ಸಿಐಎಸ್‌ಎಫ್.
ಆಗ್ರಾ: ವಿಶ್ವ ವಿಖ್ಯಾತ ತಾಜ್ ಮಹಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕೆರೆ ಬಂದಿದ್ದು, ಕೂಡಲೇ ಐತಿಹಾಸಿಕ ಕಟ್ಟಡವನ್ನು ತೊರೆಯುವಂತೆ ಪ್ರವಾಸಿಗರಿಗೆ ಪೊಲೀಸರು ಸೂಚಿಸಿರುವ ಘಟನೆ ನಡೆದಿದೆ.
ಆಗ್ರಾದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ಅನಾಮಿಕ ವ್ಯಕಜ್ತಿ, ಐತಿಹಾಸಿಕ ತಾಜ್ ಮಹಲ್ ಕಟ್ಟಡದೊಳಗೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲದೇ ಯಾವುದೇ ಕ್ಷಣದಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂದೂ ಬೆದರಿಕೆ ಹಾಕಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಆಗ್ರಾ ಪೊಲೀಸರು, ತಾಜ್ ಮಹಲ್ ಒಳಗಿರುವ ಪ್ರವಾಸಿಗರು ಕೂಡಲೇ ಸ್ಥಳವನ್ನು ತೊರೆಯುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಂಪೂರ್ಣ ತಾಜ್‌ಮಹಲ್‌ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಆಗ್ರಾ ಎಸ್‌ಪಿ ಶಿವರಾಮ್ ಯಾದವ್, ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೇ ತಾಜ್ ಮಹಲ್‌ನಿಂದ ಪ್ರವಾಸಿಗರನ್ನು ಹೊರಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ವ್ಯ್ಕಕ್ತಿ ಅನಾಮಿಕ ವ್ಯಕ್ತಿ, ಸೇನಾ ನೇಮಕಾತಿಯಲ್ಲಿ ಅಕ್ರಮ ನಡೆದ ಪರಿಣಾಮ ತಾನು ಆಯ್ಕೆಯಾಗಲಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾನೆ. ಅಲ್ಲದೇ ಈ ಕಾರಣಕ್ಕೆ ತಾಜ್ ಮಹಲ್‌ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಎಸ್‌ಪಿ ಶಿವರಾಮ್ ಯಾದವ್ ಹೇಳಿದ್ದಾರೆ.
ಸದ್ಯ ಫಿರೋಜಾಬಾದ್‌ನಿಂದ ಬಾಂಬ್ ಬೆದರಿಕೆ ಕರೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು, ಅನಾಮಿಕ ವ್ಯಕ್ತಿಗಾಗಿ ಶೋಧ ಆರಂಭಿಸಿದ್ದಾರೆ.
ಇನ್ನು ತಾಜ್ ಮಹಲ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಆಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿರುವ ಸಿಐಎಸ್‌ಎಫ್, ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.