‘ನಾಟಕ ಬಿಡಿ ಮೀಸಲಾತಿ ಕೊಡಿ’ ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮುದಾಯದಿಂದ ಅಭಿಯಾನ

ಹೈಲೈಟ್ಸ್‌:

  • ‘ನಾಟಕ ಬಿಡಿ ಮೀಸಲಾತಿ ಕೊಡಿ’ ಅಭಿಯಾನ
  • ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ ಅಭಿಯಾನ
  • ವಾಲ್ಮೀಕಿ ಸಮುದಾಯದಿಂದ ತೀವ್ರಗೊಂಡ ಮೀಸಲಾತಿ ಬೇಡಿಕೆ

ಬೆಂಗಳೂರು: ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದ ಮೀಸಲಾತಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಹಾಗೂ ಮಾರ್ಗದರ್ಶನ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಹೀಗಿದ್ದರೂ ಮೀಸಲಾತಿ ಹೋರಾಟದ ಕಾವು ಇನ್ನೂ ನಿಂತಿಲ್ಲ. ‘ನಾಟಕ ಬಿಡಿ ಮೀಸಲಾತಿ ಕೊಡಿ’ ಎಂದು ವಾಲ್ಮೀಕಿ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಅಭಿಯಾನ ಶುರುಮಾಡಿದೆ.

ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ವಾಲ್ಮೀಕಿ ಸಮುದಾಯದ ಒಕ್ಕೂಟ ಅಭಿಯಾನ ಆರಂಭಿಸಿದೆ. ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಲ್ಲಿ ಈ ಅಭಿಯಾನ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮುಂದುವರಿದಿದೆ.

ಸರ್ಕಾರ ರಚಿಸಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆ ವರದಿ ಅನುಷ್ಠಾನಕ್ಕಾಗಿ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರವೇ ಸಂಪುಟ ಉಪಸಮಿತಿ ರಚಿಸಿತ್ತು. ಇದರಿಂದಾಗಿ ಮಾರ್ಚ್ 9ರೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಫೆ.9 ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಚನ ನೀಡಿದ್ದರು.

ಆದರೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಆದರೂ ಸರ್ಕಾರವೇ ರಚಿಸಿದ್ದ ಸಂಪುಟ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವರದಿ ನೀಡಿಲ್ಲ. ಇದರ ನಡುವೆ ಲಿಂಗಾಯತ ಪಂಚಮಸಾಲಿ ಹೋರಾಟ, ಕುರುಬರ ಹೋರಾಟ, ನೇಕಾರರ ಹೋರಾಟ, ಸವಿತಾ ಸಮಾಜದ ಹೋರಾಟಗಳು ನಡೆದು ಎಲ್ಲರೂ ಅವರದ್ದೇ ಆದ ಮೀಸಲಾತಿಗೆ ಪಟ್ಟು ಹಿಡಿದಿವೆ ಎಂಬುವುದು ವಾಲ್ಮೀಕಿ ಸಮುದಾಯದ ವಾದ.

ಆದ್ರೆ ಪರಿಶಿಷ್ಟ ವರ್ಗದ ಮೀಸಲಾತಿ ಹೋರಾಟಕ್ಕೂ ಉಳಿದ ಸಮುದಾಯಗಳ ಹೋರಾಟಕ್ಕೂ ಯಾವುದೇ ಸಂಬಂಧ ಇರದಿದ್ದರೂ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮೀಸಲಾತಿ ಅನುಷ್ಠಾನದ ಕುರಿತು ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚನೆ ಮಾಡಲು ನಿರ್ಧರಿಸಿದೆ.

ಈಗಾಗಲೇ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿ ನೀಡಿದ ವರದಿ ಅನುಷ್ಠಾನಕ್ಕೆ ಮತ್ತೊಬ್ಬರು ನಿವೃತ್ತ ನ್ಯಾಯಮೂರ್ತಿಯ ಪರಿಶೀಲನೆ ವರದಿ ಅಗತ್ಯ ಏನಿದೆ? ಎಂಬ ಪ್ರಶ್ನೆಯನ್ನು ವಾಲ್ಮೀಕಿ ಸಮುದಾಯದ ಪ್ರಮುಖರು ಕೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಪರಿಶಿಷ್ಟ ಪಂಗಡದ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ “ನಾಟಕ ಬಿಡಿ, ಮೀಸಲಾತಿ ಕೊಡಿ” ಅಭಿಯಾನ ಆರಂಭಿಸಿದೆ. ಈಗ ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡ್ತಿದೆ. ಇದು ಸರಿಯಾದ ಕ್ರಮವಲ್ಲ. ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತನ್ನ ತಪ್ಪು ಸರಿಪಡಿಸಿಕೊಳ್ಳಬೇಕು. ಜೊತೆಗೆ ತಕ್ಷಣವೇ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ. 7.5 ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಈ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಯಕರ ಒಕ್ಕೂಟ ಎಚ್ಚರಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *