‘ಒಂದು ದೇಶ, ಒಂದು ಚುನಾವಣೆ’ಯಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ: ಸಿಎಂ ಯಡಿಯೂರಪ್ಪ
ಬೆಂಗಳೂರು: ‘ಒಂದು ದೇಶ, ಒಂದು ಚುನಾವಣೆ’ಯಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಗುರುವಾರ ಹೇಳಿದರು.
ವಿಧಾನಸಭೆಯಲ್ಲಿ ಇಂದು ‘ಒಂದು ದೇಶ, ಒಂದು ಚುನಾವಣೆ’ ವಿಚಾರವಾಗಿ ಮಾತನಾಡಿದ ಸಿಎಂ ಬಿಎಸ್ ವೈ ಅವರು, ‘ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆದಲ್ಲಿ ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ಈ ಚುನಾವಣೆಗಳಿಂದ ಕೆಲವು ವ್ಯತ್ಯಾಸಗಳು ಆಗಬಹುದು. ಆದರೆ, ಒಟ್ಟಾರೆ ದೇಶದ ಪ್ರಗತಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ದೇಶ ಒಂದು ಚುನಾವಣೆ ಎಂಬುದು ಪ್ರಗತಿಪರ ಆಲೋಚನೆಯಾಗಿದೆ. ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಭಾರತದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಯುವ ಪದ್ಧತಿ ಅನುಷ್ಠಾನಕ್ಕೆ ಬರಲಿ. ಅನಗತ್ಯ ಖರ್ಚು, ವೆಚ್ಚಗಳು ಮತ್ತು ಸಮಯದ ಉಳಿತಾಯ ಇದರಿಂದ ಸಾಧ್ಯವಾಗಲಿದೆ. ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಸಂಸತ್ತಿನ ಉಭಯ ಸದನಗಳಲ್ಲಿ ಹಾಗೂ ರಾಜ್ಯದ ವಿಧಾನಮಂಡಲಗಳಲ್ಲಿ ಚಿಂತನ-ಮಂಥನ ನಡೆಸಿದರೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಅಲ್ಲದೆ ಈ ನಿಯಮ ಜಾರಿಗೆ ಬಂದರೆ ಕೆಲವು ರಾಜಕೀಯ ಹೊಂದಾಣಿಕೆ ಅನಿವಾರ್ಯವಾಗುವುದು. ಲೋಕಸಭೆ- ವಿಧಾನಸಭೆಗಳ ಅವಧಿಯಲ್ಲಿ ಏರಿಳಿತಗಳಾಗಬಹುದು. ಇವೆಲ್ಲ ಪ್ರಾರಂಭಿಕ ಅಡಚಣೆಗಳಾಗಿದ್ದು, ಇವೆಲ್ಲವನ್ನೂ ಮೀರಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ತರುವುದು ದೊಡ್ಡ ಸವಾಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಸ್ತೃತ ಚರ್ಚೆ ಮೂಲಕ ಸಾಧಕ-ಬಾಧಕಗಳನ್ನು ತಿಳಿದರೆ ಸ್ಪಷ್ಟತೆ ಮೂಡಲಿದೆ. ಏಕಕಾಲದಲ್ಲಿ ಚುನಾವಣೆಗಳು ನಡೆದಲ್ಲಿ ಆಡಳಿತ ಯಂತ್ರದ ಸುಗಮ-ದಕ್ಷ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ. ಕಾಲಕಾಲಕ್ಕೆ ಖಾಲಿಯಾಗುವ ಶಾಸಕರು, ಮತ್ತಿತರ ಸ್ಥಾನಗಳಿಸಬೇಕು. ಉಪಚುನಾವಣೆ ಇಲ್ಲದೆ ತುಂಬುವ ವ್ಯವಸ್ಥೆಗೆ ನಾಂದಿ ಹಾಡಬೇಕಾಗಿದೆ. ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ಮತದಾರರ ಹಿತಕ್ಕೆ ಯಾವುದೇ ಧಕ್ಕೆಯಾಗದಂತೆ ಚುನಾವಣೆ ನಡೆಸುವುದು ಮುಖ್ಯ. ಆಡಳಿತ ಸುಧಾರಣೆಯ ದಿಕ್ಕಿನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಚುನಾವಣೆ ಯಶಸ್ಸು ಹಣಬಲದ ಮೇಲೆ ನಿಂತಿರುವುದು ದುರದೃಷ್ಟಕರ
ಅಂತೆಯೇ ಇತ್ತೀಚಿನ ದಿನಗಳಲ್ಲಿ ಚುನಾವಣೆ ಯಶಸ್ಸು ಹಣಬಲದ ಮೇಲೆ ನಿಂತಿರುವುದು ದುರದೃಷ್ಟಕರ ಎಂದು ಹೇಳಿದ ಯಡಿಯೂರಪ್ಪ ಅವರು, ವ್ಯಕ್ತಿತ್ವ, ಚರಿತ್ರೆ ಹಾಗೂ ಅಭ್ಯರ್ಥಿಗಳ ವರ್ಚಸ್ಸು ಮತ್ತು ವಿಶ್ವಾಸಾರ್ಹತೆಯನ್ನು ಅವಲಂಬಿಸಬೇಕು. ಪಾರದರ್ಶಕ ಚುನಾವಣೆಗಳು ನಡೆಯುವುದರಿಂದ ಪಕ್ಷ, ಅಭ್ಯರ್ಥಿ ಹಾಗೂ ಮತದಾರರ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಿ ದೇಶದಲ್ಲಿ ಮಹತ್ವದ ಬದಲಾವಣೆ ತರಲಿದೆ. ಆಳವಾದ ಅಧ್ಯಯನ ಮತ್ತು ಸಮಾಲೋಚನೆ, ಸವಿಸ್ತಾರವಾದ ಚರ್ಚೆ ನಡೆಯಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿರುವ ನಮಗೆ ಚುನಾವಣೆಯಲ್ಲಿ ಏಕರೂಪ ವ್ಯವಸ್ಥೆ ಜಾರಿಗೆ ತರುವುದು ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ವಿಧಾನಮಂಡಲವು ಸಂಕ್ಷಿಪ್ತ ನಿರ್ಣಯ ಕೈಗೊಂಡು ಶಿಫಾರಸು ಮಾಡಲಿ ಎಂದು ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಧರಣಿ
ಒಂದು ದೇಶ, ಒಂದು ಚುನಾವಣೆ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿ, ಚರ್ಚೆಯ ಪ್ರತಿಯನ್ನೇ ಹರಿದು ಹಾಕಿ ಭಾವಿಗಿಳಿದು ಧರಣಿ ನಡೆದರು. ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಇಂತಹ ವಿಧಾನಮಂಡಲದ ಕಲಾಪದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಒಂದು ದೇಶ, ಒಂದೇ ಚುನಾವಣೆ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಸಿದ್ದರಾಮಯ್ಯ ಮಾತನಾಡಿ, ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಗೆ ಅವಕಾಶ ಚರ್ಚೆಗೆ ನಮ್ಮ ಒಪ್ಪಿಗೆಯಿಲ್ಲ. ಇದು ಆರ್ ಎಸ್ ಎಸ್ ಅಜೆಂಡಾ ಆಗಿದೆ ಯಾವುದೇ ಕಾರಣಕ್ಕೂ ಈ ಚರ್ಚೆಗೆ ಸಮ್ಮತಿಯಿಲ್ಲ ಎಂದು ಪಟ್ಟು ಹಿಡಿದರು.