ಮೈಸೂರಲ್ಲಿ ಏಪ್ರಿಲ್‌ 5 ರಿಂದ ಪ್ಲಾಸ್ಟಿಕ್‌ ಬಳಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಹೈಲೈಟ್ಸ್‌:

  • ಪ್ಲಾಸ್ಟಿಕ್‌ ಬಳಸಿದರೆ ಕಠಿಣ ಕ್ರಮಕ್ಕೆ ಮುಂದಾದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
  • ಏಪ್ರಿಲ್‌ 5ರಿಂದ ಕಡ್ಡಾಯವಾಗಿ ಕಠಿಣ ಕ್ರಮ, ಪರ್ಯಾಯ ಉತ್ಪನ್ನಗಳ ಬಳಕೆಗೆ ಡಿಸಿ ಸೂಚನೆ
  • ಮೊದಲ ಹಂತದಲ್ಲಿ ಮೈಸೂರು ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಅನುಷ್ಠಾನ

ಮೈಸೂರು: ಪರಿಸರ ಸಂರಕ್ಷಣೆ ಉದ್ದೇಶದಿಂದ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಏಪ್ರಿಲ್‌ 5 ರಿಂದ ಕಡ್ಡಾಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಮಾರುಕಟ್ಟೆಯಲ್ಲಿನ ಎಲ್ಲಾ ಅಂಗಡಿ ಹಾಗೂ ಇತರ ಪ್ಲಾಸ್ಟಿಕ್‌ ಬಳಸುವ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಪರ್ಯಾಯವಾಗಿ ಕಾಗದ ಹಾಗೂ ಬಟ್ಟೆಯಿಂದ ತಯಾರಿಸಿದ ವಸ್ತುಗಳನ್ನು ಬಳಸಬೇಕು. ಕಾಗದದ ಲೋಟ, ಕಾಗದದ ಚೀಲ, ಬಟ್ಟೆ ಬ್ಯಾಗ್‌ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತು ಬಳಸಲು ಅವಕಾಶ ನೀಡದೆ ಏಕಾಏಕಿ ದಾಳಿ ಮಾಡಿದರೆ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಒಂದು ತಿಂಗಳ ಗಡುವು ನೀಡಿ ಕರಿಣ ಕ್ರಮ ಕೈಗೊಳ್ಳಬೇಕು. ಮೊದಲನೇ ಹಂತದಲ್ಲಿ ಮೈಸೂರು ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧವನ್ನು ಜಾರಿಗೆ ತರಲಾಗುವುದು. ಎಂದು ರೋಹಿಣಿ ಸಿಂಧೂರಿ ಹೇಳಿದರು.
ಬಳಿಕ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ಲಾಸ್ಟಿಕ್‌ ನಿಷೇಧ ಮಾಡಲಾಗುವುದು. ಕಾವೇರಿ, ಕಬಿನಿ, ಹಾಗೂ ಲಕ್ಷ್ಮಣತೀರ್ಥ ನದಿಗಳಿಗೆ ಹುಣಸೂರು, ನಂಜನಗೂಡು, ತಿ.ನರಸೀಪುರ, ಬನ್ನೂರು ಪಟ್ಟಣಗಳ ತ್ಯಾಜ್ಯ ನೀರನ್ನು ನೇರವಾಗಿ ಬಿಡಬಾರದು. ಈ ನೀರನ್ನು ಸಂಸ್ಕರಿಸಿದ ನಂತರವೇ ನದಿಗೆ ಬಿಡಬೇಕು, ನೀರನ್ನು ಸಾಧ್ಯವಾದಷ್ಟು ಮರುಬಳಕೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ಮೈಸೂರಿನಲ್ಲಿ ಪ್ರತ್ಯೇಕ ಮಂಡಳಿ ಸ್ಥಾಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೈಸೂರು ನಗರ ಪಾಲಿಕೆಗೆ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ವನಾಗ್‌, ಅಧೀಕ್ಷಕ ಎಂಜಿನಿಯರ್‌ ಬಿಳಿಗಿರಿ ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಶಾದ್‌ ಆರ್‌. ಷರೀಫ್‌, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *