ಕಲಬುರಗಿ : ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಂವಿಧಾನಬದ್ಧ ಹಕ್ಕುಗಳಿಗೆ ಆಗ್ರಹಿಸಿ ಧರಣಿ

ಕಲಬುರಗಿ:ಪರಿಶಿಷ್ಟ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರವು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮೊತ್ತವನ್ನು ವಾರ್ಷಿಕ 15000 ಕೋಟಿ ರೂ.ಗಳಿಗೆ ಹೆಚ್ಚಿಸುವಂತೆ, ಪರಿಶಿಷ್ಟ ಸಮುದಾಯಗಳ ಆದಾಯ ಮಿತಿಯನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ, ಮ್ಯಾನೇಜ್‍ಮೆಂಟ್ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿದರು.
ಬ್ಯಾಕ್‍ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ, ಖಾಸಗಿ ವಲಯಗಳಲ್ಲಿಯೂ ಮೀಸಲಾತಿ ಕೊಡುವಂತೆ, ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸುವಂತೆ, ವಸತಿ ನಿಲಯಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳ ಕಟ್ಟಡಗಳನ್ನೂ ಹೆಚ್ಚಿಸುವಂತೆ, ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಗಳ ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಮೀಸಲಾತಿ ಅನುಸರಿಸುವಂತೆ ಅವರು ಆಗ್ರಹಿಸಿದರು.
ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ಏಕಗವಾಕ್ಷಿ ಯೋಜನೆ ಜಾರಿಗೊಳಿಸುವಂತೆ, ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಎಲ್ಲ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವಂತೆ, ಸರ್ಕಾರಿ ಭೂಮಿಯಲ್ಲಿ ಅಕ್ರಮ ಸಾಗುವಳಿದಾರರು ಫಾರಂ 57ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಅವಕಾಶ ಕೊಡುವಂತೆ ಅವರು ಒತ್ತಾಯಿಸಿದರು.
ಆರನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪಾಠ-7 ಹೊಸ ಧರ್ಮಗಳ ಉದಯ (ಜೈನ್-ಬೌದ್ಧ) ಬೋಧನೆ- ಕಲಿಕೆ, ಮೌಲ್ಯಮಾಪನಕ್ಕೆ ಪರಿಗಣಿಸದೇ ಇರುವ ಶಿಕ್ಷಣ ಸಚಿವರು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಅವರು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಮಹಾದೇವ್ ಕೋಳಕೂರ್ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಭೀಮಶಾ ಖನ್ನಾ, ನಾಗಪ್ಪ ವಳಕೇರಿ, ಧರ್ಮಣ್ಣ ಇಟಗಿ, ದವಲಪ್ಪ ಮದನ್, ಸಾಯಬಣ್ಣ ಮೇಲಕೇರಿ, ವಿಜಯಕುಮಾರ್ ಟೈಗರ್, ಮಹೇಶ್ ಕೊಳ್ಳಿ, ರಾಜಕುಮಾರ್ ಪಡಸಾವಳಗಿ, ಚಿದಾನಂದ್ ಅರ್ಜುಣಗಿ, ಲಕ್ಷ್ಮೀಕಾಂತ್ ಘತ್ತರಗಿ, ಬಾಬು ಪರಸೂನ್, ಗೌತಮ್ ಪಾಳಾ, ಸಾತಪ್ಪ ಭೂಪಾಲ್‍ತೆಗನೂರ್, ಶಂಕರ್ ಚಲುವಾದಿ, ರಾಮಣ್ಣ ಒಂಟಿ ಮುಂತಾದವರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *