ಕಲಬುರಗಿ : ಇಟಗಾ ಚರ್ಚ್ಗೆ ನುಗ್ಗಿ ದೌರ್ಜನ್ಯ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಇಟಗಾ ಗ್ರಾಮದ ಚರ್ಚ್ನಲ್ಲಿ ಪ್ರಾರ್ಥನೆ ತೊಡಗಿದ್ದವರ ಮೇಲೆ ಗುಂಪೊಂದು ಒಳನುಗ್ಗಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲ್ಲೆಗೆ ಒಳಗಾದವರು ಪೋಲಿಸ್ ಭವನದ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಅಡಿವೆಪ್ಪ ತಂದೆ ಕಾಂತಪ್ಪ ವಾಲಿಕರ್ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ, ಕಳೆದ ಫೆಬ್ರವರಿ 27ರಂದು ರಾತ್ರಿ 8 ಗಂಟೆಗೆ ಚರ್ಚ್ನಲ್ಲಿ ನಾನು ಹಾಗೂ ನಿರ್ಮಲಾ ಗಂಡ ಜಯಶೀಲ ವಾಲಿಕರ್, ಸುವರ್ಣ ಗಂಡ ವಿಜಯಕುಮಾರ್ ವಾಲಿಕರ್, ಚಂದ್ರಕಾಂತ್ ತಂದೆ ಮರೆಪ್ಪ, ಸಮಸನ್ ತಂದೆ ಶಾಂತಪ್ಪ ವಾಲಿಕರ್, ವಿಜಯಕುಮಾರ್ ತಂದೆ ಕಾಂತಪ್ಪ ವಾಲಿಕರ್, ಸಲ್ಮಾನ್ ತಂದೆ ಶಾಂತಪ್ಪ ವಾಲಿಕರ್ ಮುಂತಾದವರು ಪ್ರಾರ್ಥನೆ ಮಾಡುವಾಗ ಗುಂಪೊಂದು ಒಳನುಗ್ಗಿ ಹಲ್ಲೆ ಮಾಡಿತು ಎಂದು ಆರೋಪಿಸಿದರು.
ಜಯಾ ತಂದೆ ಭೀಮಶ್ಯಾ ಶಹಾಬಾದಿ, ಸುನೀಲ್ ತಂದೆ ಸೂರ್ಯಕಾಂತ್ ನಾಯಕಲ್, ಬಸ್ಸು ತಂದೆ ಶರಣಪ್ಪ ನಾಯಕಲ್, ಅಶೋಕ್ ತಂದೆ ರಾವಪ್ಪ ನಾಯಕಲ್, ನಾಗೇಂದ್ರ ತಂದೆ ದಾದಾ ಮರೆಪ್ಪ, ಗೌತಮ್ ನಾಯಕಲ್, ದೇವಪ್ಪ ಅಲಿಯಾಸ್ ರಾಕೇಶ್ ತಂದೆ ಶರಣಪ್ಪ ತೆಲಿದರ್ಗಿ ಮುಂತಾದವರು ಚರ್ಚಿನೊಳಗೆ ನುಗ್ಗಿ ಹಲ್ಲೆ ಮಾಡಿದರು ಎಂದು ಅವರು ದೂರಿದರು.
ಜಯಾ ತಂದೆ ಭೀಮಶ್ಯಾ ಧ್ವನಿವರ್ಧಕ ಹೆಚ್ಚಳವಾಗಿದ್ದರ ಕುರಿತು ಅತ್ಯಂತ ಅಸಭ್ಯವಾಗಿ ಹಾಗೂ ಅಶ್ಲೀಲವಾಗಿ ಬೈದು ನನಗೆ ಕಪಾಳಕ್ಕೆ ಹೊಡೆದ. ಅದಕ್ಕೆ ಆಕ್ಷೇಪಿಸಿದ ನಿರ್ಮಲಾ ಅವರಿಗೆ ಚಾಕುವಿನಿಂದ ಹೊಡೆಯಲು ಹೋದಾಗ ರಕ್ಷಿಸಲು ಯತ್ನಿಸಿದಾಗ ಎಡಗೈಗೆ ಹತ್ತಿ ರಕ್ತದ ಗಾಯವಾಯಿತು. ವಿಜಯಕುಮಾರ್ ಗೌತಮ್ ಎಂಬಾತನು ಹಲ್ಲೆ ಮಾಡಿದ. ಸುವರ್ಣಾ ಅವರ ಕುಪ್ಪಸ ಹಿಡಿದು ಎಳೆದಾಡಿದರು. ಚಂದ್ರಕಾಂತ್, ಸಾಮಸನ್, ಸಲ್ಮಾನ್ ಎಲ್ಲರೂ ಬಿಡಿಸಲು ಬಂದಾಗ ಸುನೀಲ್ ತಂದೆ ಸೂರ್ಯಕಾಂತ್, ಬಸ್ಸು ತಂದೆ ಶರಣಪ್ಪ ನಾಯ್ಕಲ್, ಅಶೋಕ್ ತಂದೆ ರಾವಪ್ಪ ನಾಯಕಲ್, ನಾಗೇಂದ್ರ ತಂದೆ ದಾದಾ ಮರೆಪ್ಪ, ದೇವಪ್ಪ ಅಲಿಯಾಸ್ ರಾಕೇಶ್ ತಂದೆ ಶರಣಪ್ಪ ಕೂಡಿಕೊಂಡು ಹಲ್ಲೆ ಮಾಡಿದರು ಎಂದು ಅಡಿವೆಪ್ಪ ಅವರು ಆರೋಪಿಸಿದರು.
ಈ ಕುರಿತು ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.