ಕಲಬುರಗಿ : ಮಹಾ ಪಂಚಾಯಿತಿಗಳ ಮೂಲಕ ಕೃಷಿ ಮಾರಕ ಕಾಯ್ದೆಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಯೋಗೇಂದ್ರ ಯಾದವ್ ಕರೆ

ಕಲಬುರಗಿ : ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ಮಾರಕ ಮೂರು ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ಮಹಾ ಪಂಚಾಯಿತಿಗಳ ಮೂಲಕ ಲಕ್ಷಾಂತರ ರೈತರು ಹೋರಾಟವನ್ನು ಆರಂಭಿಸಿದ್ದು, ಈ ಹೋರಾಟ ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಬಾರದು. ಇಡೀ ಭಾರತದ ತುಂಬಾ ವ್ಯಾಪಿಸಬೇಕು. ಅಂತಹ ಆಂದೋಲನವು ಕರ್ನಾಟಕದಿಂದ ಆರಂಭವಾಗುತ್ತಿದ್ದು, ಎಲ್ಲರೂ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ಮಾರಕ ಕೃಷಿ ಕಾಯ್ದೆಗಳನ್ನು ಹಿಮ್ಮೆಟ್ಟಿಸಬೇಕು ಎಂದು ನವದೆಹಲಿಯ ರೈತ ಹೋರಾಟದ ಸೂತ್ರದಾರ ಹಾಗೂ ರಾಷ್ಟ್ರೀಯ ಚಿಂತಕ ಪ್ರೊ. ಯೋಗೇಂದ್ರ ಯಾದವ್ ಅವರು ಕರೆ ನೀಡಿದರು.
ನಗರದ ಗಂಜ್ ಪ್ರದೇಶದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಂದೆ ಶುಕ್ರವಾರ ಹಮ್ಮಿಕೊಂಡ ಕೃಷಿ ಬೆಂಬಲ ಬೆಲೆ ತೋರಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಮೂರು ಕಾಯ್ದೆಗಳನ್ನು ಕೊಡುಗೆ ಕೊಟ್ಟಿರುವುದಾಗಿ ಹೇಳುತ್ತಾರೆ. ಆದಾಗ್ಯೂ, ಅದು ಕೊಡುಗೆಯಲ್ಲ. ಆ ಮೂರು ಕಾಯ್ದೆಗಳು ಮಾರಕವಾಗಿದ್ದು, ಅವುಗಳನ್ನು ಹಿಂಪಡೆಯಬೇಕೆಂದು ಲಕ್ಷಾಂತರ ರೈತರು ಕಳೆದ ನೂರು ದಿನಗಳಿಂದಲೂ ದೆಹಲಿಯಲ್ಲಿ ಹೋರಾಟ ಆರಂಭಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಮಗುವಿಗೆ ಹುಟ್ಟುಹಬ್ಬ ಆಚರಿಸುವಾಗ ಪೋಷಕರು ಯಾವ ಕೊಡುಗೆ ಬೇಕು ಎಂದು ಕೇಳುತ್ತಾರೆ. ಆದಾಗ್ಯೂ, ಪ್ರಧಾನಿಯವರು ರೈತರಿಗೆ ಕೊಡುಗೆ ಕೊಡುವ ಕುರಿತು ಏನೊಂದೂ ಕೇಳದೇ ಏಕಪಕ್ಷೀಯವಾಗಿ ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ಕೊಡುಗೆ ಎಂದು ಹೇಳುತ್ತಿದ್ದಾರೆ ಎಂದು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಮಾರಕ ಕಾಯ್ದೆಗಳ ವಿರುದ್ಧ ಇಡೀ ದೇಶಾದ್ಯಂತ ಹೋರಾಟಗಳು ಆರಂಭಗೊಂಡಿವೆ. ಹರಿಯಾಣಾ, ಮಧ್ಯಪ್ರದೇಶ್, ರಾಜ್ಯಸ್ತಾನ್, ಉತ್ತರ ಖಾಂಡ್, ಉತ್ತರ ಪ್ರದೇಶ್, ಬಿಹಾರ್, ಚಂಡಿಗಡ್, ದೆಹಲಿ ಸೇರಿದಂತೆ ಎಲ್ಲ ರಾಜ್ಯಗಳಿಂದಲೂ ಲಕ್ಷಾಂತರ ರೈತರು ಹೋರಾಟ ಆರಂಭಿಸಿದ್ದಾರೆ. ಮಳೆ, ಬಿಸಿಲು, ಛಳಿ ಎನ್ನದೇ ಮನೆಗಳನ್ನು ತೊರೆದು ಹೋರಾಟ ಮಾಡಿದರೂ ಸಹ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದಾಗಿ ಉತ್ತರ ಭಾರತದಲ್ಲಿ ಮಹಾ ಪಂಚಾಯಿತಿಗಳ ಮೂಲಕ ಪ್ರಬಲ ಹೋರಾಟ ಮಾಡುತ್ತಿದ್ದಾರೆ. ಒಂದೊಂದು ಮಹಾ ಪಂಚಾಯಿತಿ ಮೂಲಕ ಒಂದು ಲಕ್ಷ ರೈತ ಹೋರಾಟಗಾರರು ಚಳುವಳಿ ಆರಂಭಿಸಿದ್ದಾರೆ. ಇಂತಹ ಚಳುವಳಿ ದಕ್ಷಿಣ ಭಾರತಕ್ಕೂ ವಿಸ್ತಾರಗೊಳ್ಳಬೇಕು ಎಂದು ಅವರು ಹೇಳಿದರು.
ಮಾರಕ ಕಾಯ್ದೆಗಳನ್ನು ಹಿಂಪಡೆಯುವುದು ನಮಗಾಗಿ ಹಾಗೂ ನಿಮಗಾಗಿ ಅಲ್ಲ ಎಂದು ಹೇಳಿದ ಯೋಗೇಂದ್ರ ಯಾದವ್ ಅವರು, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಕಾಯ್ದೆಗಳನ್ನು ಹಿಮ್ಮೆಟ್ಟಿಸಬೇಕು ಎಂದು ವೇದಿಕೆಯ ಮೇಲಿದ್ದ ಪುಟ್ಟ ಬಾಲಕಿಯನ್ನು ವೇದಿಕೆಯ ಮೇಲೆ ತಮ್ಮ ಪಕ್ಕಕ್ಕೆ ಕರೆತಂದು ಕರೆ ನೀಡಿದರು.
ಇದೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಆ ಸಂದರ್ಭದಲ್ಲಿ ಡಾ. ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ಕೊಡಬೇಕು ಎಂದು ಆಗ್ರಹಿಸಿದ್ದರು. ಈಗ ಅವರೇ ಪ್ರಧಾನಿಯಾಗಿದ್ದರೂ ಸಹ ಬೆಂಬಲ ಬೆಲೆ ಕೊಡುವಂತಹ ಯಾವುದೇ ಕಾನೂನು ಜಾರಿಗೆ ತಂದಿಲ್ಲ ಎಂದು ಅವರು ದೂರಿದರು.
ಈಗ ನೋಡಿದರೆ ಹಿಂದೆಯೂ ಬೆಂಬಲ ಬೆಲೆ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ ಎಂಬ ಪ್ರಧಾನಿ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಯಾದವ್ ಅವರು, ಎಲ್ಲಿದೆ ಬೆಂಬಲ ಬೆಲೆ ತೋರಿಸಿ ಎಂದು ಸವಾಲು ಹಾಕಿದರು.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದೆ. ತೊಗರಿ ಬೆಂಬಲ ಬೆಲೆ ಕುಸಿದಿದೆ. ಆ ಬೆಳಗಳಿಗೆ ಸೂಕ್ತ ಬೆಂಬಲ ಬೆಲೆ ಕೊಡುವ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕವು ರೈತ ಚಳುವಳಿಗೆ ಹೆಸರಾಗಿದೆ. ನಂಜುಂಡಸ್ವಾಮಿ ಅವರ ಕರ್ನಾಟಕ ರೈತ ಸಂಘದ ಹೋರಾಟವು ಪ್ರಬಲವಾಗಿತ್ತು. ಅದೇ ರೀತಿ ಗೋಪಾಲಗೌಡರ ಕಾಗೋಡು ಚಳುವಳಿಯೂ ಸಹ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಹೇಳಿದ ಅವರು, ಮಾರಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಬೇಕು ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ರೈತ ನಾಯಕ ಸತ್ನಾಮ್‍ಸಿಂಗ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, ರಾಜ್ಯ ರೈತ ಸಂಘದ ನಾಗೇಂದ್ರ ಬಗದಲಪೂರ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಕೆ. ನೀಲಾ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ಎಚ್.ಕೆ. ದಿವಾಕರ್, ಚಾಮರಸ್ ಪಾಟೀಲ್, ಎಸ್.ಆರ್. ಕೊಲ್ಲೂರ್, ಬಸ್ಸುಗೌಡ, ಎ.ಬಿ. ಹೊಸಮನಿ, ಪ್ರಕಾಶ್ ಕಮ್ಮರಡಗಿ ಮುಂತಾದವರು ಪಾಲ್ಗೊಂಡಿದ್ದರು., ಸಮಾವೇಶಕ್ಕೂ ಮುನ್ನ ಯೋಗೇಂದ್ರ ಯಾದವ್ ಅವರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವರ್ತಕರು, ರೈತರು ಹಾಗೂ ಹಮಾಲರೊಂದಿಗೆ ಸಮಾಲೋಚನೆ ಮಾಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *