ಮಾ.8ಕ್ಕೆ ರಾಜ್ಯ ಬಜೆಟ್ ಮಂಡನೆ: ಹೊಸ ತೆರಿಗೆ ಇಲ್ಲ, ಇಂಧನ ಬೆಲೆ ಇಳಿಕೆ ಇಲ್ಲ ಎಂದು ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ 2021-22ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಯಾವುದೇ ಹೊಸ ತೆರಿಗೆ ಹೇರುವುದಿಲ್ಲ, ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಜನತೆಗೆ ಹೊಸ ತೆರಿಗೆ ಯಾವುದನ್ನೂ ಹೇರುವುದಿಲ್ಲ ಎಂಬ ಸುಳಿವನ್ನು ಮುಖ್ಯಮಂತ್ರಿ ನೀಡಿದ್ದಾರೆ.
ಆದರೆ ರಾಜ್ಯದಲ್ಲಿ ಇಂಧನ ತೆರಿಗೆಯನ್ನು ಇಳಿಸುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ. ನಿನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಬಜೆಟ್ ಪೂರ್ವದಲ್ಲಿ ಸಿಎಂ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಈಗಾಗಲೇ ಹೆಚ್ಚಾಗಿರುವುದರಿಂದ ರಾಜ್ಯದ ಜನತೆಗೆ ಯಾವುದೇ ಹೊಸ ತೆರಿಗೆ ಹೇರಿ ಮತ್ತಷ್ಟು ಹೊರೆ ವಿಧಿಸುವುದಿಲ್ಲ ಎಂದಿದ್ದಾರೆ.
ನಾವು ಯಾವುದೇ ಹೊಸ ತೆರಿಗೆ ಹೇರುವುದಿಲ್ಲ. ಕೆಲವು ಸಣ್ಣ ತಿದ್ದುಪಡಿ ಮಾಡುತ್ತೇವಷ್ಟೆ. ಹಾಗಾದರೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತೀರಾ ಎಂದು ಕೇಳಿದಾಗ ಅದನ್ನು ಮಾಡುವ ಸ್ಥಿತಿಯಲ್ಲಿ ಸದ್ಯಕ್ಕೆ ಸರ್ಕಾರವಿಲ್ಲ ಎಂದರು.
ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಕಾಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ ಅವರು, ಆದಾಯ, ಸಂಪನ್ಮೂಲ ಸಂಗ್ರಹಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್-19ನಿಂದಾಗಿ ತೆರಿಗೆ ಸಂಗ್ರಹ ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ತೀವ್ರ ಕುಸಿದಿದೆ. ಸರ್ಕಾರ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 6 ಸಾವಿರ ಕೋಟಿ ರೂಪಾಯಿ ವ್ಯಯಿಸಬೇಕಾಗಿದೆ ಎಂದರು.
ಸೋಮವಾರ ಮಧ್ಯಾಹ್ನ ೧೨.೦೫ ಕ್ಕೆ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ. ಅಂದು ಮಧ್ಯಾಹ್ನ ೧೨ ಕ್ಕೆ ಸದನ ಸಮಾವೇಶಗೊಳ್ಳಲಿದ್ದು, ೨೦೧೯ ರಲ್ಲಿ ತಮ್ಮ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ಎರಡನೆ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.