ಮಹಿಳೆಯರ ಅಭಿವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಒತ್ತು: ಸಿಎಂ ಯಡಿಯೂರಪ್ಪ
ಬೆಂಗಳೂರು: ಮಾರ್ಚ್ 8ರಂದು 2021-22ನೇ ಸಾಲಿನ ಬಜೆಟ್ ಮಂಡಿಸಲು ಮುಖ್ಯಮತ್ರಿ ಬಿ ಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ. ಅಂದು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿರುವುದರಿಂದ ಬಜೆಟ್ ನಲ್ಲಿ ಮಹಿಳೆಯರ ಪರವಾದ ಅನೇಕ ಯೋಜನೆಗಳನ್ನು ಪ್ರಕಟಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ.
ಪ್ರವಾಸೋದ್ಯಮ, ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂಬ ಮಾತನ್ನು ಮುಖ್ಯಮಂತ್ರಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದ ವೇಳೆ ತಿಳಿಸಿದ್ದಾರೆ. ಈ ವೇಳೆ ಮಹಿಳೆಯರ ಅಭಿವೃದ್ಧಿಗೆ ಕೂಡ ಬಜೆಟ್ ನಲ್ಲಿ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್-19 ಲಾಕ್ ಡೌನ್ ನಿಂದ ಮತ್ತು ಆದಾಯ ಕೊರತೆಯಿಂದ ರಾಜ್ಯ ಸರ್ಕಾರದ ಖಜಾನೆ ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಜೆಟ್ ಯಾವ ರೀತಿ ಮಂಡಿಸಬಹುದು ಎಂದು ಮುಖ್ಯಮಂತ್ರಿಗಳು ಕಳೆದ ವಾರದಿಂದ ಸಚಿವರುಗಳು, ಹಿರಿಯ ಅಧಿಕಾರಿಗಳು, ಕೈಗಾರಿಕಾ ಪ್ರತಿನಿಧಿಗಳು ಮತ್ತು ಇತರ ಸಂಬಂಧಪಟ್ಟವರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದರು. ನಿನ್ನೆ ಬಜೆಟ್ ತಯಾರಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಬಜೆಟ್ ತಯಾರಿಯನ್ನು ಮುಕ್ತಾಯಗೊಳಿಸಿ ಇಂದು ಪ್ರಿಂಟು ಹಾಕಿಸಲು ಕಳುಹಿಸಿದ್ದೇವ, ಬಜೆಟ್ ತಯಾರಿ ತೃಪ್ತಿ ತಂದಿದೆ, ಈ ಬಾರಿ ಉತ್ತಮ ಬಜೆಟ್ ಮಂಡಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಿನ್ನೆ ಸಂವಾದದ ವೇಳೆ ಮಹಿಳೆಯರ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗುವುದು ಎಂದು ಮೂರು ಬಾರಿ ಒತ್ತಿ ಹೇಳಿದರು. ಆದರೆ ಮಹಿಳಾಪರ ಯಾವ್ಯಾವ ಯೋಜನೆಗಳನ್ನು ಘೋಷಣೆ ಮಾಡುತ್ತೀರಿ ಎಂದು ಕೇಳಿದಾಗ ವಿವರಣೆ ನೀಡಲಿಲ್ಲ.