ಹೊಸ ಕಾರುಗಳಲ್ಲಿ 2 ಏರ್ ಬ್ಯಾಗ್‌ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ: ಹಳೆ ಕಾರಿಗೂ ಅಳವಡಿಸಬೇಕೇ?

ಹೊಸದಿಲ್ಲಿ: ದೇಶದಲ್ಲಿ ಅಪಘಾತ ಸಂಖ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಕಾರು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಪಟ್ಟಂತೆ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಮಾರಾಟವಾಗುವ ಹೊಸ ಕಾರುಗಳಲ್ಲಿ ಎರಡೆರಡು ಏರ್ ಬ್ಯಾಗ್‌ಗಳು ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಘೋಷಣೆ ಮಾಡಿದೆ. ಅದರಂತೆ ಇನ್ನು ಮುಂದೆ ಎಲ್ಲಾ ಹೊಸ ಕಾರುಗಳಲ್ಲಿ ಏಪ್ರಿಲ್ 1 ರಿಂದ ಡ್ಯುಯಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದೆ.

ಇನ್ನು ಪ್ರಸ್ತುತ ಈಗಾಗಲೇ ನಿರ್ಮಾಣ ಮಾಡಿರುವ ಕಾರುಗಳಿಗೂ ಆಗಸ್ಟ್ ನಿಂದ ಡ್ಯುಯಲ್ ಏರ್ ಬ್ಯಾಗ್‌ಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಸಂಬಂಧ ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ. ಅಧಿಸೂಚನೆಯಲ್ಲಿ ಹೊಸ ಕಾರುಗಳಿಗೆ ಎಂದು ಉಲ್ಲೇಖಿಸಲಾಗಿದ್ದು, ಹಳೆಯ ಕಾರುಗಳ ಬಗ್ಗೆ ಅಧಿಸೂಚನೆಯಲ್ಲಿ ಪ್ರಸ್ತಾಪ ಮಾಡಿಲ್ಲ.

ಇನ್ನು ಈ ಏರ್ ಬ್ಯಾಗ್ ಅಳವಡಿಕೆಯಿಂದ ಕಾರುಗಳ ಬೆಲೆಯನ್ನು ಸರಾಸರಿ 5,000 ರೂ.ಗಳಿಂದ 7,000 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ, ಎಲ್ಲಾ ಕಾರುಗಳಿಗೆ ಚಾಲಕನ ಸೀಟ್‌ಗೆ ಮಾತ್ರ ಏರ್‌ಬ್ಯಾಗ್ ಕಡ್ಡಾಯವಾಗಿತ್ತು. ಇದೀಗ ಮುಂದಿನ ಎರಡು ಸೀಟ್‌ಗಳಿಗೆ ಇದು ಕಡ್ಡಾಯವಾಗಿದೆ. ರಸ್ತೆ ಸುರಕ್ಷತಾ ಮಾನದಂಡಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸಮಿತಿಯ ಸಲಹೆಗಳನ್ನು ಆಧರಿಸಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾರ್ಕ್ ಅಡಿಯಲ್ಲಿ ಏರ್‌ಬ್ಯಾಗ್‌ ಎಐಎಸ್ 145 ಗುಣಮಟ್ಟದ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸಾಮಾನ್ಯವಾಗಿ ಕಾರು ಅಪಘಾತಗಳು ಸಂಭವಿಸಿದಾಗ ಕಾರಿನ ಮುಂಭಾಗದಲ್ಲಿ ಕುಳಿತವರಿಗೆ ತಲೆಗೆ ಪೆಟ್ಟಾಗಿ ಸಾಯುವ ಸಂಭವ ಹೆಚ್ಚು. ಆದರೆ ಇಂತಹ ಸಂದರ್ಭಗಳಲ್ಲಿ ಕಾರಿನಲ್ಲಿ ಅಳವಡಿಸಲಾಗುವ ಏರ್‌ಬ್ಯಾಗ್‌ಗಳು ಅಪಘಾತದ ಸಂದರ್ಭದಲ್ಲಿ ತಲೆಗೆ ಆಗುವ ಸಂಭಾವ್ಯ ಪೆಟ್ಟನ್ನು ಬಹುತೇಕ ತಡೆಯುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *