ಜಾತಿ ನಿಂದನೆ ಆರೋಪ: ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರ ಅರೆಸ್ಟ್‌..!

ಹೈಲೈಟ್ಸ್‌:

  • ಜಾತಿ ನಿಂದನೆ ಹಾಗೂ ಹಲ್ಲೆ ಆರೋಪ ಎದುರಿಸುತ್ತಿರುವ ಶಾಸಕರ ಪುತ್ರ
  • ಕಬ್ಬಡ್ಡಿ ಪಂದ್ಯಾವಳಿ ವೇಳೆ ಗುಂಪು ಘರ್ಷಣೆ ನಡೆದಿತ್ತು
  • ಉಭಯ ಗುಂಪುಗಳೂ ಪರಸ್ಪರ ದೂರು ನೀಡಿದ ಪರಿಣಾಮ ರಾಜಕೀಯ ತಿರುವು ಪಡೆದಿತ್ತು
ಭದ್ರಾವತಿ (ಶಿವಮೊಗ್ಗ): ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್‌ ಬಿಚ್ಚಿ ಪ್ರತಿಭಟಿಸಿ ಅಮಾನತು ಶಿಕ್ಷೆಗೆ ಗುರಿಯಾದ ಪ್ರಕರಣ ಜನಜನಿತವಾಗಿರುವ ಬೆನ್ನಲ್ಲೇ, ಇದೀಗ ಅವರ ಮಗನ ಬಂಧನವಾಗಿದೆ.

ಜಾತಿ ನಿಂದನೆ ಹಾಗೂ ಹಲ್ಲೆ ಆರೋಪ ಎದುರಿಸುತ್ತಿದ್ದ ಭದ್ರಾವತಿ ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಪುತ್ರ ಬಸವೇಶ್ವರ್‌ನನ್ನ ಶಿವಮೊಗ್ಗ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ. ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಶಾಸಕನ ಪುತ್ರ, ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ.

ಕಳೆದ ವಾರ ಭದ್ರಾವತಿಯಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿ ಸಮಯದಲ್ಲಿ ಬಿಜೆಪಿ ಮುಖಂಡರಿದ್ದ ತಂಡ ಹಾಗೂ ಶಾಸಕರ ಬೆಂಬಲಿಗರ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯಿತು. ಈ ವೇಳೆ ಉಭಯ ಗುಂಪುಗಳೂ ಪರಸ್ಪರ ದೂರು ನೀಡಿದ್ದರು.

ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕಾಗಿ ಶಾಸಕರ ಬೆಂಬಲಿಗರು ಹಾಗೂ ಆತನ ಪುತ್ರ ಬಸವೇಶ್ವರ್‌ ಹಲ್ಲೆ ನಡೆಸಿದರು ಅನ್ನೋದು ಬಿಜೆಪಿ ಮುಖಂಡರ ದೂರು. ಹಲ್ಲೆಯಿಂದಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಿಜೆಪಿ ಮುಖಂಡರು, ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕವೂ ಆಸ್ಪತ್ರೆ ಮುಂದೆ ಶಾಸಕರ ಎದುರೇ ಪುನಃ ಗಲಾಟೆ ನಡೆದಿತ್ತು. ಹಾಗಾಗಿ ಶಾಸಕ ಹಾಗೂ ಶಾಸಕರ ಪುತ್ರನ ಮೇಲೆ ಪ್ರಕರಣ ದಾಖಲಾಗಿವೆ.

ಇತ್ತ ಭದ್ರಾವತಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಅತ್ತ ಬೆಂಗಳೂರಿನಲ್ಲಿ ವಿಧಾನಸಭೆ ಕಲಾಪ ಶುರುವಾಗಿತ್ತು. ಅಧಿವೇಶನಕ್ಕೂ ಮುನ್ನವೇ ಶಾಸಕ ಸಂಗಮೇಶ್‌ ಬೆಂಗಳೂರಿಗೆ ಬಂದಿದ್ದರು. ವಿಡಿಯೋ ಒಂದನ್ನು ಹರಿಬಿಟ್ಟಿದ್ದ ಸಂಗಮೇಶ್, ನನ್ನನ್ನು ಯಾರೂ ಅರೆಸ್ಟ್‌ ಮಾಡಿಲ್ಲ, ನಾನು ಕಲಾಪಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು.

ಇದಾದ ಬಳಿಕ ಸದನದೊಳಗೆ ಅಂಗಿ ಬಿಚ್ಚಿ ಅಶಿಸ್ತು ಪ್ರದರ್ಶನ ಮಾಡಿದ್ದಕ್ಕಾಗಿ ಸಂಗಮೇಶ್‌ರನ್ನ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಆರು ದಿನಗಳ ಕಾಲ ಕಲಾಪದಿಂದ ಅಮಾನತು ಮಾಡಿದ್ದರು. ಇದೀಗ ಸ್ಪೀಕರ್‌ ಅನುಮತಿ ನೀಡಿದರೆ, ಶಿವಮೊಗ್ಗ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಶಾಸಕರನ್ನೂ ಅರೆಸ್ಟ್‌ ಮಾಡಲಿದೆ.

ಬಿಜೆಪಿ ಮುಖಂಡರೊಂದಿಗೆ ಚೆನ್ನಾಗಿಯೇ ಇದ್ದ ಶಾಸಕ ಸಂಗಮೇಶ್,‌ ಹೊಂದಾಣಿಕೆ ಮೂಲಕ ಬಗೆಹರಿಸಬಹುದಾದ ಪ್ರಕರಣವನ್ನ ದೊಡ್ಡದು ಮಾಡಿಕೊಂಡು ಭದ್ರಾವತಿಯಲ್ಲಿ ಬಿಜೆಪಿ ತಳವೂರಲು ಅನುಕೂಲ ಮಾಡಿಕೊಟ್ಟರೇ ಎಂಬ ಅನುಮಾನ ಮೂಡುತ್ತಿದೆ. ಸದ್ಯ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇನ್ನಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *