ದೇಶಾದ್ಯಂತ 10 ಸಾವಿರ ಜನೌಷಧಿ ಕೇಂದ್ರ ಸ್ಥಾಪನೆಗೆ ಕ್ರಮ

ನವದೆಹಲಿ,ಮಾ.೭- ಶೀಘ್ರದಲ್ಲೇ ೧೦ ಸಾವಿರ ಜನೌಷಧಿ ಕೇಂದ್ರವನ್ನು ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ಈ ಜನೌಷಧ ಕೇಂದ್ರಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜನರನ್ನು ಉಳಿಸಲು ಸಹಕಾರಿಯಾಗಲಿವೆ ಎಂದು ವಾರ್ಷಿಕ ೩,೬೦೦ ಕೋಟಿ ರೂ. ವಹಿವಾಟು ನಡೆಸಿರುವ ಜನೌಷಧಿ ದಿವಸ್ ಸಂಭ್ರಮಾಚರಣೆ ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಭಾರತೀಯ ಜನೌಷಧ ಪರಿಯೋಜನಾ ಫಲಾನುಭವಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಪ್ರಧಾನಿ ಈ ಯೋಜನೆಯು ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಅಗ್ಗದ ದರದಲ್ಲಿ ಔಷಧಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇಂದು ಶಿಲಾಂಗ್‌ನಲ್ಲಿ ೭,೫೦೦ನೇ ಜನೌಷಧ ಕೇಂದ್ರ ಉದ್ಘಾಟನೆಯಾಗಿರುವುದು ಈಶಾನ್ಯದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಎಷ್ಟು ವಿಸ್ತರಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
೨೦೧೪ರವರೆಗೆ ನಾವು ೧೦೦ಕ್ಕಿಂತಲೂ ಕಡಿಮೆ ಜನೌಷಧ ಕೇಂದ್ರಗಳನ್ನು ಹೊಂದಿದ್ದೆವು. ಪ್ರಸ್ತುತ ೧೦ ಸಾವಿರ ಜನೌಷಧ ಕೇಂದ್ರಗಳನ್ನು ಶೀಘ್ರದಲ್ಲೇ ತೆರೆಯುವ ಉದ್ದೇಶ ಹೊಂದಲಾಗಿದೆ.
೭೫ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ೭೫ ಜಿಲ್ಲೆಗಳಲ್ಲಿ ತಲಾ ೭೫ ಜನೌಷಧ ಕೇಂದ್ರಗಳನ್ನು ತೆರೆಯಲು ಪ್ರತಿಜ್ಞೆ ಮಾಡಲಾಗಿದೆ. ಈ ಸಂಬಂಧ ರಾಜ್ಯಸರ್ಕಾರಗಳಿಗೆ ಮನವಿ ಮಾಡಲಾಗಿದ್ದು, ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು
ದ್ವಿಗುಣಗೊಳಿಸಲು ಹಾಗೂ ಫಲಾನುಭವಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಗುರಿಯನ್ನು ತಲುಪಲು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.
ಜನೌಷಧ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಯೋಜನೆ ಸೇವೆ ಮತ್ತು ಉದ್ಯೋಗದ ಮಾಧ್ಯಮವಾಗುತ್ತಿದೆ. ಈ ಕೇಂದ್ರಗಳಲ್ಲಿ ಜನರು ಕೈಗೆಟಕುವ ದರದಲ್ಲಿ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಈ ಕೇಂದ್ರಗಳಲ್ಲಿ ಯುವಕರಿಗೆ ಉದ್ಯೋಗ ಸಹ ದೊರೆಯುತ್ತಿದೆ ಎಂದರು.
೨.೫ ರೂ.ಗಳಿಗೆ ಬಾಲಕಿಯರಿಗೆ ಸ್ಯಾನಿಟೆರಿ ಪ್ಯಾಡ್ ಲಭ್ಯವಾಗುತ್ತಿದೆ. ಪ್ರಸ್ತುತ ಜನೌಷಧ ಕೇಂದ್ರಗಳಲ್ಲಿ ೧೧ ಸಾವಿರ ಕೋಟಿಗೂ ಅಧಿಕ ಸ್ಯಾನಿಟರಿ ಪ್ಯಾಡ್‌ಗಳ ಮಾರಾಟ ಮಾಡಲಾಗಿದೆ ಎಂದ ಅವರು, ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ಈ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಶಕ್ತಿ ತುಂಬಿದಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಜನೌಷಧಿ ಕೇಂದ್ರಗಳು ಬಡ ಮತ್ತು ಮಧ್ಯವ ವರ್ಗದ ಕುಟುಂಬಗಳ ಹಣ ಉಳಿತಾಯಕ್ಕೆ ಸಹಕಾರಿಯಾಗಿವೆ. ಯೋಜನೆ ವಿಸ್ತರಿಸುವ ಉದ್ದೇಶದಿಂದ ಕೇಂದ್ರಗಳ ಪ್ರೋತ್ಸಾಹ ಧನವನ್ನು ೨.೫ ಲಕ್ಷ ರೂ.ಗಳಿಂದ ೫ ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ದಲಿತರು, ಬುಡಕಟ್ಟು ಜನಾಂಗದವರು, ಮಹಿಳೆಯರು ಮತ್ತು ಈಶಾನ್ಯ ಜನರಿಗೆ ೨ ಲಕ್ಷ ರೂ.ಗಳ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಿಂದ ಜನೌಷಧಗಳ ಪೀಠೋಪಕರಣಗಳ ಖರೀದಿಗೆ ಸಹಾಯವಾಗಲಿದೆ ಎಂದರು.
ಈ ಯೋಜನೆ ಔಷಧ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇಂದು ಮೇಡ್ ಇನ್ ಇಂಡಿಯಾ ಔಷಧಗಳು ಮತ್ತು ಶಸ್ತ್ರ ಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆಯೂ ಹೆಚ್ಚಾಗುತ್ತಿದೆ. ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು.
ಮೂಲಭೂತ ಔಷಧಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಹೆಚ್ಚು ಗಮನ ಹರಿಸಿದೆ. ದೀರ್ಘ ಕಾಲದವರೆಗೆ ಆರೋಗ್ಯ ಮತ್ತು ಚಿಕಿತ್ಸೆ ಏಕೈಕ ವಿಷಯ ಎಂದು ಪರಿಗಣಿಸಲಾಗಿತ್ತು. ಇಂದು ದೇಶದ ಇಡೀ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಶೀಘ್ರ ೧೦ ಸಾವಿರ ಜನೌಷಧಿ ಕೇಂದ್ರಗಳು ಆರಂಭ.

೨.೫೦ ರೂ.ಗೆ ಸ್ಯಾನಿಟರಿ ಪ್ಯಾಡ್.

೧೧ ಸಾವಿರ ಕೋಟಿಗೂ ಅಧಿಕ ಸ್ಯಾನಿಟರಿ ಪ್ಯಾಡ್ ಮಾರಾಟ.

ಮಹಿಳೆಯರಿಂದ ಸಾವಿರ ಜನೌಷಧಿ ಕೇಂದ್ರ ನಿರ್ವಹಣೆ.

ಕೇಂದ್ರಗಳ ಪ್ರೋತ್ಸಾಹ ಧನ ೫ ಲಕ್ಷಕ್ಕೆ ಹೆಚ್ಚಳ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *