ಏ.9 ಐಪಿಎಲ್ ಆವೃತ್ತಿಗೆ ಚಾಲನೆ
ಮುಂಬೈ,ಮಾ.೭- ಬಹು ನಿರೀಕ್ಷಿತ ೧೪ನೇ ಇಂಡಿಯನ್ ಪ್ರೀಮಿಯರ್ ಲೀಗ್ ಏ. ೯ ರಿಂದ ಮೇ ೩೦ರವರೆಗೆ ಭಾರತದ ಹಲವು ನಗರಗಳಲ್ಲಿ ನಡೆಯಲಿದ್ದು, ಮೊದಲನೇ ಹಣಾಹಣಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವೆ ಚೆನ್ನೈನಲ್ಲಿ ನಡೆಯಲಿದೆ.
ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಕ್ಕೆ ಐಪಿಎಲ್-೨೦೨೧ರ ಸರಣಿ ಏ. ೯ ರಂದು ಚೆನ್ನೈನಲ್ಲಿ ಆರಂಭವಾಗಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ವಿಶ್ವದ ಶ್ರೀಮಂತ ಪಂದ್ಯಾವಳಿಯೆಂದೇ ಹೆಸರು ಪಡೆದಿರುವ ಟಿ-೨೦ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಐಪಿಎಲ್ ಆಯೋಜಕರ ಮಾಹಿತಿಯನ್ವಯ ಮುಂಬೈ ಸೇರಿದಂತೆ ೬ ಪ್ರಮುಖ ನಗರಗಳನ್ನು ಪಂದ್ಯಾವಳಿಗಾಗಿ ಆಯ್ಕೆ ಮಾಡಲಾಗಿದೆ. ಅಹಮದಾಬಾದ್ ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ನ ಅಂತಿಮ ಹಣಾಹಣಿ ಮೇ. ೩೦ ರಂದು ನಡೆಯಲಿದೆ.
ಒಟ್ಟು ೫೬ ಪಂದ್ಯಗಳನ್ನು ಮೂರು ಬ್ಯಾಚ್ಗಳಾಗಿ ವಿಭಜಿಸಲಾಗಿದ್ದು, ಚೆನ್ನೈ, ಮುಂಬೈ ನಗರಗಳಲ್ಲಿ ಮೊದಲ ೨೦ ಪಂದ್ಯಗಳು ನಡೆಯಲಿದೆ. ನಂತರ ದೆಹಲಿ, ಅಹಮದಾಬಾದ್ ನಗರಗಳಲ್ಲಿ ಹಂತ-೧೬ ಪಂದ್ಯಗಳು ನಡೆಯಲಿವೆ. ಕೊಲ್ಕತ್ತ ಮತ್ತು ಬೆಂಗಳೂರು ಕೊನೆಯ ೨೦ ಪಂದ್ಯಗಳು ನಡೆಯಲಿದೆ. ನಂತರ ಅಂತಿಮ ಪಂದ್ಯಕ್ಕಾಗಿ ಮತ್ತೆ ತಂಡಗಳು ಅಹಮದಾಬಾದ್ ನಗರಕ್ಕೆ ತೆರಳಲಿವೆ.
ಮುಂಬೈನಲ್ಲಿ ಪಂದ್ಯಾವಳಿ ಆಯೋಜನೆ ಕುರಿತಂತೆ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆ, ಮುಂಬೈನಲ್ಲಿ ಪಂದ್ಯ ನಡೆಸಬೇಕಾ ಬೇಡವಾ ಎಂಬ ಗೊಂದಲದಲ್ಲಿ ಸಿಲುಕಿವೆ.
ಆರಂಭದಲ್ಲಿ ಮುಂಬೈ ನಗರವನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತಾದರೂ ನಂತರ ಕೋವಿಡ್ ಹೆಚ್ಚಳ ಹಿನ್ನೆಲೆ ಕೆಲ ಗೊಂದಲ ಸೃಷ್ಟಿಯಾಗಿದೆ.