ಮಹಿಳಾ ದಿನಾಚರಣೆ ವಿಶೇಷ: ಸ್ತ್ರೀ ದೌರ್ಜನ್ಯದ ಶವಪೆಟ್ಟಿಗೆಗೆ ಕೊನೆಮೊಳೆ ಹೊಡೆಯಲು ಇನ್ನೆಷ್ಟು ವರ್ಷ ಬೇಕು?

ತೇಜಶ್ರೀ ಶೆಟ್ಟಿ, ಬೇಳ

‘ಜಗವೆಂಬ ಹಣತೆಯಲ್ಲಿ ಬದುಕೆಂಬ ಎಣ್ಣೆ ಹಾಕಿ ಗಂಡೆಂಬ ಬತ್ತಿಯಲ್ಲಿ ಹೆಣ್ಣೆಂಬ ಜ್ಯೋತಿ ಹಚ್ಚಿದರೆ ಜಗವೆಲ್ಲಾ ಬೆಳಗುವುದಿಲ್ಲವೇ..?’ ಆಹಾ ಎಂತಹಾ ಅರ್ಥಗರ್ಭಿತವಾದ ಮಾತು..! ಸಾಮಾಜಿಕ ಜೀವನದಲ್ಲಿ ಗಂಡು-ಹೆಣ್ಣಿನ ಸಮಾನ ಪಾತ್ರವನ್ನು ಈ ಸಾಲುಗಳು ಪ್ರತಿಬಿಂಬಿಸುತ್ತವೆ‌.

 

ಹೌದು, ಸಮಾಜದಲ್ಲಿ ಹೆಣ್ಣು ಗಂಡೆಂಬುದು ಎರಡು ಕಣ್ಣುಗಳಿದ್ದಂತೆ. ಆದರೆ ಶತಶತಮಾನಗಳಿಂದ ಒಂದು ಕಣ್ಣಾದ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಗಳು ಈ ಕಾಲಕ್ಕೂ ನಿಂತಿಲ್ಲ. ಆಧುನಿಕ ಭಾರತ, ಸ್ತ್ರೀ ಸಮಾನತೆ ಎಂದು ಹೇಳುವ ನಾವು ಅಂತರಂಗದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಮಗೇ ಗೊತ್ತಿಲ್ಲದೆ ಪೋಷಿಸುತ್ತಾ ಬಂದಿದ್ದೇವೆ. ಈ ಕಾಲದಲ್ಲೂ ನಿತ್ಯ ನಿರಂತರವಾಗಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಸತ್ಯ. ದಿನಪತ್ರಿಕೆಗಳನ್ನು ಬಿಡಿಸಿ ನೋಡಿದರೆ ಪ್ರತಿನಿತ್ಯ ಒಂದಲ್ಲೊಂದು ರೀತಿಯಲ್ಲಿ ಹೆಣ್ಣಿನ ಮೇಲಾಗುವ ದೌರ್ಜನ್ಯ ಪ್ರಕರಣಗಳು ಕಣ್ಣು ಕುಕ್ಕುತ್ತವೆ.

ಸ್ವಾತಂತ್ರ್ಯಾ ನಂತರ ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾದರೂ ಇಂದಿಗೂ ಹಲವೆಡೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅತ್ಯಾಚಾರದಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಎಷ್ಟೋ ಪ್ರಕರಣಗಳು ತೆರೆಮರೆಯಲ್ಲಿಯೇ ಕಣ್ಮರೆಯಾಗಿವೆ. ಇದಕ್ಕೆ ಕಾರಣ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಮುಂದಿನ ಭವಿಷ್ಯ ಮತ್ತು ಮರ್ಯಾದೆಗೆ ಅಂಜುವ ಪೋಷಕರು. ಇಂತಹ ಹಿಂಜರಿಕೆಗಳಿಂದಲೇ ಸ್ತ್ರೀ ದೌರ್ಜನ್ಯ ನಡೆಸುವ ರಕ್ಕಸರು ಅಟ್ಟಹಾಸ ಮೆರೆಯಲು ಪರೋಕ್ಷವಾಗಿ ಅನುಮತಿ ಸಿಕ್ಕಂತಾಗಿದೆ. ಹೀಗಾಗಿ ರಾತ್ರಿ ಹೊತ್ತು ಮನೆಯಿಂದ ಹೊರಗಿಳಿಯಲು ಹೆಣ್ಣು ಮಕ್ಕಳು ಭಯಪಡುತ್ತಿರುವುದು.

ವರದಕ್ಷಿಣೆಯೆಂಬ ಸಾಮಾಜಿಕ ಪಿಡುಗು ಇಂದಿಗೂ ನಮ್ಮ ಹೆಣ್ಣುಮಕ್ಕಳ ಪಾಲಿಗೆ ಕಂಟಕವಾಗಿದೆ ಅಂದರೆ ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿ. ದಿನನಿತ್ಯ ದೇಶದಲ್ಲಿ ಸಾವಿರಾರು ಹೆಣ್ಮಕ್ಕಳು ವರದಕ್ಷಿಣೆಯಂತಹ ಅಸಹ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಮಹಿಳೆಯೊಬ್ಬಳು ಇದೇ ಪಿಡುಗಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದನ್ನು ಕಂಡಿದ್ದೇವೆ. ಇದೊಂದು ದೇಶಮಟ್ಟದಲ್ಲಿ ಸುದ್ದಿಯಾದ ತಾಜಾ ಉದಾಹರಣೆಯಷ್ಟೇ. ಆದರೆ ಅದೆಷ್ಟೋ ದೌರ್ಜನ್ಯ ಪ್ರಕರಣಗಳು ನಾಲ್ಕು ಗೋಡೆಯ ಮಧ್ಯೆಯೇ ಸತ್ತುಹೋಗಿವೆ. ಇದೇ ಕಾರಣಕ್ಕೆ ಪ್ರಾಣತೆತ್ತ ಮಹಿಳೆಯರ ಸಂಖ್ಯೆಯು ಕಡಿಮೆಯೇನಲ್ಲ.

ಸ್ತ್ರೀ ಸಬಲೀಕರಣದ ಹೋರಾಟಕ್ಕೆ ಪುರುಷ ವಿರೋಧಿ ಹೋರಾಟ ಎಂಬ ಹಣೆಪಟ್ಟಿ ಕಟ್ಟಿದ ಸಂಗತಿಯೂ ಇದೆ. ಮಹಿಳಾ ಪರ ಹೋರಾಟ ಅಂದರೆ ಪುರುಷ ವಿರೋಧಿ ಅಲ್ಲ ಅನ್ನುವ ಸಾಮಾನ್ಯ ಜ್ಞಾನವನ್ನು ನಾವು ಬೆಳೆಸಿಕೊಳ್ಳುತ್ತೇವೆಯೋ, ಆಗಲೇ ಶತಮಾನಗಳಿಂದ ಮಹಿಳೆಯರನ್ನು ಎರಡನೇ ಪ್ರಜೆಯನ್ನಾಗಿ ಅಮಾನುಷವಾಗಿ ನಡೆಸಿಕೊಂಡು ಬಂದುದನ್ನು ರಾಗಿಕಾಳಿನಷ್ಟು ಅರ್ಥೈಸಲು ಸಾಧ್ಯ. ಅಂತೆಯೇ ವಿಧವೆಯರ ಪರಿಸ್ಥಿತಿಯೂ ಶೋಚನೀಯವಾಗಿದೆ. ಭಾರತದ ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿ ಇಂದಿಗೂ ವಿಧವೆಯರನ್ನು ವೇಶ್ಯಾವಾಟಿಕೆಗೆ ತಳ್ಳುವಂತಹ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಕರ್ನಾಟಕವೂ ಇದಕ್ಕೆ ಹೊರತೇನಲ್ಲ. ವಿಧವಾ ಮಹಿಳೆಯರನ್ನು ಈ ನೆಲದ ಗಂಡಸರು ನೋಡುವ ನೋಟ ಯಾವಾಗ ಬದಲಾಗುತ್ತದೆಯೋ, ಮಹಿಳೆಯೊಬ್ಬಳು ಪುರುಷನ ಅಡಿಯಾಳಾಗಿಯೇ ಇರಬೇಕು ಎಂಬ ಕೆಟ್ಟ ಯೋಚನೆಯನ್ನು ಈ ಸಮಾಜ ಬದಲಾಯಿಸುವುದಿಲ್ಲವೋ ಅಲ್ಲಿಯತನಕ ಅವರಿಗೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *