ಸಾಲು ಸಾಲು ಸವಾಲುಗಳ ನಡುವೆಯೇ ಸಿಎಂ ಯಡಿಯೂರಪ್ಪರಿಂದ ಇಂದು 8ನೇ ಬಜೆಟ್
ಬೆಂಗಳೂರು: ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ಎದುರಾದ ಆರ್ಥಿಕ ಸಂಕಷ್ಟ ಸೇರಿದಂತೆ ಸಾಲು ಸಾಲು ಸವಾಲುಗಳ ನಡುವಲ್ಲೂ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಈಗಾಗಲೇ ಪಾತಾಳ ಮುಟ್ಟಿ ಮೇಲೇರುತ್ತಿರುವ ಆರ್ಥಿಕತೆಗೆ ಟಾನಿಕ್ ನೀಡಲು 2021-2022ನೇ ಸಾಲಿನ ಆಯವ್ಯಯದಲ್ಲಿ ಯಾವ ಯಾವ ಕ್ರಮಗಳನ್ನು ಅನುಸರಿಸಲಿದ್ದಾರೆಂಬುದು ಜನರಲ್ಲಿ ಕುತೂಹಲವನ್ನು ಮೂಡಿಸಿದೆ. 2006-07ರಿಂದ 2011-12ರ ನಡುವೆ ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಹಾಗೂ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಯಡಿಯೂರಪ್ಪ ಅವರು ಮುಂಗಡ ಪತ್ರ ಮಂಡಿಸಿದ್ದರು.
ಇದೀಗ ಮುಖ್ಯಮಂತ್ರಿಯಾಗಿ ಐದನೇ ಹಾಗೂ ಒಟ್ಟಾರೆ ಈ ವರೆಗೆ 7 ಬಜೆಟ್ ಮಂಡಿಸಿರುವ ಅವರು, ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ತಮ್ಮ 8ನೇ ಬಜೆಟ್ ಮಂಡಿಸುತ್ತಿದ್ದಾರೆ.
ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಘೋಷಿಸುವ ನಿರೀಕ್ಷೆಗಳಿವೆ. ಜೊತೆಗೆ ರೈತರು ಹಾಗೂ ಕೊರೋನಾ ಕಾರಣ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಘೋಷಣೆ ಮಾಡುವ ಸಾಧ್ಯತೆಗಳೂ ಕೂಡ ಇದೆ.
ಕೊರೋನಾ ಬಳಿಕ ಇಡೀ ದೇಶದ ಆರ್ಥಿಕತೆ ಕುಸಿದಿದ್ದು, ರಾಜ್ಯದಲ್ಲೂ ಸರ್ಕಾರದ ಖಜಾನೆ ಬರಿದಾಗಿದೆ. ಹೀಗಾಗಿಯೇ 2021-2022ನೇ ಸಾಲಿನಲ್ಲಿ ಆಯವ್ಯಯದಲ್ಲಿ ಉಲ್ಲೇಖಿಸಿದ್ದ ಮೊತ್ತಕ್ಕಿಂತ ರೂ.37,000 ಕೋಟಿ ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಅನುಮತಿ ನೀಡಿತ್ತು.
ಕಳೆದ ಬಾರಿ ರೂ.2.37 ಲಕ್ಷ ಗಾತ್ರದ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ, ಕೊರೋನಾ ನಡುವೆಯೂ ಈ ಬಾರಿ ಗಾತ್ರ ಹಿಗ್ಗಿಸುವ ಪ್ರಯತ್ನದಲ್ಲಿದ್ದಾರೆ. ಇದೇ ವೇಳೆ ಈಗಾಗಲೇ ಸ್ಥಗಿತಗೊಳಿಸಿರುವ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಯೋಜನೆಗಳಿಗೆ ಅಧಿಕೃತ ಕತ್ತರಿ ಬೀಳುವ ಸಾಧ್ಯತೆಗಳಿವೆ. ಜೊತೆಗೆ ತಮ್ಮ ಸರ್ಕಾರಕ್ಕೆ ಹೆಸರು ತಂದುಕೊಡುವ ನಿಟ್ಟಿನಲ್ಲಿ ಮಹಿಳೆಯರು ಹಾಗೂ ರೈತರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಯಡಿಯೂರಪ್ಪ ಅವರೇ ಹೇಳಿರವಂತೆ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಘೋಷಿಸಲಿದ್ದು, ಆರೋಗ್ಯ, ಕೃಷಿ, ಪ್ರವಾಸೋದ್ಯಮ, ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡುವ ನಿರೀಕ್ಷೆಗಳಿವೆ.
ಆರೋಗ್ಯ ಇಲಾಖೆಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಇದಕ್ಕೆ ಸಂಪನ್ಮೂಲ ಕ್ರೋಢೀಕರಣವೇ ಸವಾಲಾಗಿ ಪರಿಣಮಿಸಿದ್ದು, ಕೊರೋನಾ ನಡುವೆಯೂ ಯಡಿಯೂರಪ್ಪ ಅವರು ಅಳೆದು ತೂಗಿ ಜನಪ್ರಿಯ ಬಜೆಟ್ ಮಂಡಿಸುವ ಕಸರತ್ತು ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.