‘ನಾನು ಲಂಚ ಪಡೆದಿದ್ದೇನೆ ಎಂದು ಯಾರಾದರೂ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’; ಸಿದ್ದರಾಮಯ್ಯ
ಹೈಲೈಟ್ಸ್:
- ನನ್ನ ಐದು ವರ್ಷದ ಅಧಿಕಾರಾವಧಿಯಲ್ಲಿ ನಾನು ಲಂಚ ಪಡೆದಿದ್ದೇನೆ ಅನ್ನೋದನ್ನು ಯಾರಾದರೂ ಸಾಬೀತು ಮಾಡಲಿ
- ಹಾಗೇನಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ
- ತುಮಕೂರಿನಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು
- ಬಿಎಸ್‌ವೈ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಲಂಚದ ಆರೋಪ ಮಾಡಿ ಹೇಳಿಕೆ
ಮಧುಗಿರಿ: ರಾಜ್ಯದಲ್ಲಿರುವುದು ಭ್ರಷ್ಟ ಸರಕಾರ. ಇಂತಹ ಕಡು ಭ್ರಷ್ಟ ಸರಕಾರವನ್ನು ರಾಜ್ಯದ ಜನತೆ ಇದುವರೆಗೂ ನೋಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ 4 ಸಾವಿರದ 400 ಕೋಟಿ ರೂ. ಖರ್ಚು ಮಾಡಿರುವುದಾಗಿ ಸರಕಾರ ಹೇಳುತ್ತದೆ. ಆದರೆ, ಇದರಲ್ಲಿ ಅರ್ಧದಷ್ಟು ಹಣ ಹೊಡೆದಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗನ ಮೂಲಕ ಲಂಚ ಪಡೆದು ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಹೋಟೆಲ್‌ಗಳಲ್ಲಿ ತಿಂಡಿ ದರದ ಪಟ್ಟಿ ಹಾಕಿರುವಂತೆ ವಿಜಯೇಂದ್ರನ ಆಫೀಸ್‌ನಲ್ಲಿ ಇಂತಿಂಥ ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು ಹಣ ಎಂದು ಬೋರ್ಡ್ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ, ನನ್ನ 5 ವರ್ಷಗಳ ಅಧಿಕಾರವಧಿಯಲ್ಲಿ ನಾನು ಲಂಚ ಪಡೆದಿದ್ದೇನೆ ಎಂದು ಯಾರಾದರೂ ಸಾಬೀತು ಪಡಿಸಿದರೆ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಇರುವ ಸಚಿವರಲ್ಲಿ 6-7 ಮಂದಿಯ ಸಿಡಿಗಳು ಹೊರ ಬರುವ ಭೀತಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿಂದೆ ಕೂಡ ಸದನದಲ್ಲಿ ಬ್ಲ್ಯೂ ಫಿಲಂ ನೋಡಿದವರು ಕೂಡ ಬಿಜೆಪಿಯವರಾಗಿದ್ದು, ಇವರು ರಾಮ ಭಕ್ತರೇ ಎಂದು ವ್ಯಂಗ್ಯವಾಡಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಮಾತನಾಡಿ, ನನ್ನ ಮತ್ತು ರಾಜಣ್ಣನವರ ಮಧ್ಯೆ ಯಾವುದೇ ಬಿನ್ನಾಭಿಪ್ರಾಯಗಳು ಇದ್ದರೂ ಅದನ್ನು ಮರೆತು ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು. ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ರೋಪ್ ವೇ, ರೈಲ್ವೆ ಹಾಗೂ ಎತ್ತಿನ ಹೊಳೆ ಯೋಜನೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.