ಮಹಿಳೆಯರಿಗೆ ಉನ್ನತ ಸ್ಥಾನಮಾನ: ಬಿ.ಕೆ. ಶಿವಲೀಲಾ
ಮಹಿಳೆಯರು ಪುರುಷರಿಗಿಂತ ಉನ್ನತ ಮಟ್ಟದ ಸ್ಥಾನಮಾನ ಸಿಗುವ ವಾತಾವರಣ ನಿರ್ಮಾಣವಾಗಿದೆ ಎಂದು ಬ್ರಹ್ಮಕುಮಾರಿಸ್ ರಿಟ್ರೀಟ್ ಸೆಂಟರ್ ಸಂಚಾಲಕಿ ಬಿ.ಕೆ. ಶಿವಲೀಲಾ ಅವರು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಹಾಗೂ ತಮ್ಮ ಜನ್ಮ ದಿನದ ನಿಮಿತ್ಯ ಸೋಮವಾರ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದ 140ರಾಷ್ಟ್ರಗಳಲ್ಲಿ ಅಬಾಲವೃದ್ಧರಲ್ಲಿ ಅಧ್ಯಾತ್ಮದ ಜಾಗೃತಿ ಮೂಡಿಸುವ ಸಫಲ ಪ್ರಯಾಸ ಮಾಡುತ್ತಿರುವ, ವಿಶ್ವದಲ್ಲಿಯೇ ಅತಿದೊಡ್ಡ ಮಹಿಳಾ ಸಂಚಾಲಿತ ಸಂಸ್ಥೆಯಾದ ಬ್ರಹ್ಮಾಕುಮಾರಿಸ್ ಇಂದು ಮಹಿಳೆಯರಲ್ಲಿ ಪುರುಷ ಸಮಾನವಲ್ಲ ಹೊರತು ಅದಕ್ಕಿಂತಲು ಉನ್ನತ ಮಟ್ಟದ ಸ್ಥಾನಮಾನ ಸಿಗುವ ದಿಶೆಯಲ್ಲಿ ಕಾರ್ಯನಿರತವಾಗಿದೆ ಎಂದರು.
ಯತ್ರ ನಾರ್ಯಸ್ತು ಪುಜ್ಯಂತೆ ಎಂಬಂತೆ ಆ ಪೂಜ್ಯ ಸ್ಥಾನ ಮಹಿಳೆಗೆ ಸಿಗಬೇಕಾದರೆ ಮುಖ್ಯವಾದುದು ಶೀಲ. ಕಮಲದಂತೆ ಪವಿತ್ರ ಜೀವನ. ತಾಯಿ ಗುರು ಸ್ಥಾನದಲ್ಲಿ ತನ್ನನ್ನು ಸ್ಥಿರಗೊಳಿಸಿದರೆ ಅವಳಿಗೆ ಸರಿಸಾಟಿಯಾಗಿ ನಿಲ್ಲುವವರಾರು ಇಲ್ಲ ಎಂದು ಅವರು ಹೇಳಿದರು.
ಮಹಿಳೆಯರಿಂದಲೇ ಸಂಚಾಲಿತ ಈ ರಿಟ್ರೀಟ್ ಕೇಂದ್ರ ಇಂದು ಲಕ್ಷಾಂತರ ಮಹಿಳೆಯರಿಗೆ ಅಧ್ಯಾತ್ಮಿಕತೆಯಡೆಗೆ ಆಕರ್ಷಿಸುತ್ತಿದೆ. ಮಹಿಳಾ ದಿನಾಚರಣೆ ಶುಭದಿನದಂದು ತಮ್ಮ ಜನ್ಮದಿನನಿಮಿತ್ಯ ಸನ್ಮಾನಿಸಿದವರಿಗೆ ಬಿ.ಕೆ. ಶಿವಲೀಲಾ ಅವರು ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಪದಾಧಿಕಾರುಗಳು ಉಪಸ್ಥಿತರಿದ್ದರು.