ಯುವ ಸಮೂಹಕ್ಕೆ ಉದ್ಯೋಗ, ಹೊಸ ನೇಮಕಾತಿ ಪ್ರಸ್ತಾಪವಿಲ್ಲ; ನವೋದ್ಯಮಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ

ಬೆಂಗಳೂರು: ಯುವ ಸಮೂಹಕ್ಕೆ ಉದ್ಯೋಗ ಒದಗಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ರಾಜ್ಯ ಬಜೆಟ್ ನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ನಿರಾಸೆ ಉಂಟು ಮಾಡಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ಯುವಜನಾಂಗದ ವಿರೋಧಿಯಾಗಿದೆ. ಕೋವಿಡ್ ನಿಂದ ರಾಜ್ಯದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಮತ್ತೆ ಉದ್ಯೋಗ ದೊರಕಿಸಿಕೊಡುವ ಯಾವುದೇ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಪ್ರಕಟಿಸಿಲ್ಲ ಎಂದಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಸಂಕಷ್ಟಗಳಿಗೆ ಬಜೆಟ್ ನಿಂದ ಸಮರ್ಪಕ ಪರಿಹಾರ ದೊರೆತಿಲ್ಲ. ಯುವ ಉದ್ಯಮಿಗಳನ್ನು, ನವೋದ್ಯಮಗಳನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಸ್ಪಷ್ಟ ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ. ಸಣ‍್ಣ ಮತ್ತು ಮಧ್ಯಮ ಉದ್ಯಮ ವಲಯವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಉದ್ಯೋಗ ನೀಡಿರುವ ಜವಳಿ ವಲಯದ ಪುನಶ್ಚೇತನಕ್ಕೆ ಬಜೆಟ್ ನಲ್ಲಿ ಏನ್ನೂ ಹೇಳಿಲ್ಲ. ಕೋವಿಡ್ ನಿಂದ ಮುಚ್ಚಲ್ಪಟ್ಟಿರುವ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ತೆರೆಯಲು ಸೂಕ್ತ ಸಾಲ ಸೌಲಭ್ಯದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದಿದ್ದಾರೆ.

ಕೋವಿಡ್ ಸಂಕಷ್ಟದಿಂದ ಹೊರ ಬರಲು ಜನ ಸಾಮಾನ್ಯರ ಕೈಯಲ್ಲಿ ಹಣ ಸರಾಗವಾಗಿ ಹರಿದಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದೆ. ಖರೀದಿದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವ ಪರಿಣಾಮ ವ್ಯಾಪಾರ ವಹಿವಾಟು ತಗ್ಗಿದೆ. ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಯುವ ಸಮೂಹ ಮತ್ತು ಜನ ಸಾಮಾನ್ಯರು ಬಜೆಟ್ ನಿಂದ ತೀವ್ರ ನಿರಾಸೆಗೆ ಒಳಗಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಬಜೆಟ್ ನಲ್ಲಿ 71,332 ಕೋಟಿ ರೂಪಾಯಿಗಳನ್ನು ಸಾಲ ಪಡೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಸಾಲ ಮಾಡಿ ವಿವಿಧ ಜಾತಿ, ಜನಾಂಗಗಳಿಗೆ ಶಾಸನಬದ್ಧ ಹಣವನ್ನು ಹಂಚಿ ಸಮಾಧಾನಪಡಿಸುವ ಕಸರತ್ತು ನಡೆಸಿದ್ದಾರೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಕೊರೋನಾದಿಂದ ಕಳೆದ ಸಾಲಿನಲ್ಲಿ ಕೇಂದ್ರದಿಂದ ಜಿ.ಎಸ್.ಟಿ.ನಷ್ಟ ಪರಿಹಾರದ ಬಾಬ್ತು 28 ಸಾವಿರ ಕೋಟಿ ರೂಪಾಯಿ ಬರಬೇಕಿತ್ತು. ಆದರೆ ಕೇವಲ 20 ಸಾವಿರ ಕೋಟಿ ರೂಪಾಯಿ ಕೇಂದ್ರದಿಂದ ಬಂದಿದೆ ಎಂದು ಹೇಳಿದ್ದಾರೆ. ಆದರೆ ಕೇಂದ್ರದಿಂದ ಜಿ.ಎಸ್.ಟಿ. ಬಾಕಿ ಹಣ ಪಡೆಯಲು ಯಾವುದೇ ಪ್ರಯತ್ನ ನಡೆಸಿಲ್ಲ. ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯದ ಪಾಲಿನ ಹಣ ಪಡೆಯಲು ಮುಖ್ಯಮಂತ್ರಿ ದಿಟ್ಟತನ ಪ್ರದರ್ಶಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಗಮನಹರಿಸಿಲ್ಲ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಹಣ ನಿಗದಿ ಮಾಡಿಲ್ಲ. ಇದರಿಂದ ಗ್ರಾಮೀಣ ಜನತೆ ಉದ್ಯೋಗವಿಲ್ಲದೇ ಪರಿತಪಿಸುವ ಪರಿಸ್ಥಿತಿ ಎದುರಾಗಲಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿವೆ. ಆದರೆ ಹೊಸ ನೇಮಕಾತಿ ಕುರಿತು ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *