ಕೋವಿಡ್ ಎರಡನೇ ಅಲೆ: ಕಲಬುರಗಿಯಲ್ಲಿ ಜಾತ್ರೆ, ಉರುಸ್ ನಿಷೇಧಿಸಿದ ಜಿಲ್ಲಾಡಳಿತ
ಕಲಬುರಗಿಯಲ್ಲಿ ಜಾತ್ರೆ, ಉರುಸ್ ಆಚರಿಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಈ ಕ್ರಮ ಕೈಗೊಂಡಿದ್ದಾರೆ
ಕಲಬುರಗಿ: ಕೊರೊನಾ ಎರಡನೇ ಅಲೆ ಹಿನ್ನೆಲೆ ಜಿಲ್ಲೆಯಾದ್ಯಂತ ಜಾತ್ರೆ, ಉರುಸ್ ನಿಷೇಧಿಸಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.
ಇಂದಿನಿಂದ ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ಜಾತ್ರೆ, ಉರುಸ್ ಆಚರಿಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಹಾರಾಷ್ಟ್ರ ಕೇರಳದಲ್ಲಿ ಕೊರೊನಾ ಉಲ್ಭಣವಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಮಹಾರಾಷ್ಟ್ರ-ಕರ್ನಾಟಕ ಗಡಿಭಾಗವಾದ ಆಳಂದ, ಅಫಜಲಪುರ ತಾಲೂಕಿನ ಏಳು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ. ಕೊರೊನಾ ನೆಗೆಟಿವ್ ವರದಿ ತೆಗೆದುಕೊಂಡು ಬಂದವರಿಗೆ ಮಾತ್ರ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.