ದೇಶದ ಮೊದಲ ಕೊರೊನಾ ಸಾವಿಗೆ ಒಂದು ವರ್ಷ: ಪ್ರಥಮ ಬಲಿ ಪಡೆದ ಕಲಬುರಗಿ ಈಗ ಸಹಜ ಸ್ಥಿತಿಯತ್ತ!
2020 ಮಾರ್ಚ್ 10 ತಾರಿಖಿನಂದು ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿತ್ತು. ಇದು ದೇಶದಲ್ಲಿ ಕೊರೊನಾಕ್ಕೆ ಮೊದಲ ಬಲಿಯಾಗಿದ್ದು, ಇದು ಕಲಬುರಗಿಯಷ್ಟೇ ಅಲ್ಲ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಆತಂಕ ಕೊಂಚ ಕಡಿಮೆಯಾದರೂ ಪ್ರಕರಣಗಳು ಮಾತ್ರ ಇನ್ನೂ ಪತ್ತೆಯಾಗುತ್ತಲೇ ಇವೆ.
ಹೌದು.. 2020ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ದೆಹಲಿ, ಮುಂಬೈಯಲ್ಲಿ ಕೊರೊನಾ ಸೋಂಕು ಉಲ್ಬಣಿಸಿತ್ತು. ಪಕ್ಕದ ಕೇರಳದಲ್ಲಿ ಕೊರೊನಾ ವೇಗವಾಗಿ ಹರಡಲು ಆರಂಭಿಸಿದಾಗ ಕರ್ನಾಟಕ ರಾಜ್ಯಕ್ಕೆ ಟೆನ್ಷನ್ ಹೆಚ್ಚಾಗಿತ್ತು. ಮಾರ್ಚ್ 08, 2020 ರಂದು ಅಮೆರಿಕದಿಂದ ಬಂದಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಟೆಕ್ಕಿಗೆ ಕೊರೊನಾ ಕಾಣಿಸಿಕೊಂಡಿತ್ತು.
ಇದು ಕರ್ನಾಟಕದ ಮೊಟ್ಟ ಮೊದಲ ಕೊರೊನಾ ಪ್ರಕರಣವಾಗಿದ್ದು, ಲಕ್ಷಾಂತರ ಜನರ ನಿದ್ದೆಗೆಡಿಸಿತ್ತು. ಆದಾದ ಬಳಿಕ 6 ಕೊರೊನಾ ಕೇಸ್ ಪತ್ತೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೊರೊನಾ ಬಂದ್ ಘೋಷಿಸಿತ್ತು.
ಅಂದು ಮಾರ್ಚ್ 10
2020 ಮಾರ್ಚ್ 10 ತಾರಿಖಿನಂದು ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿತ್ತು. ಇದು ದೇಶದ ಮೊದಲ ಕೊರೊನಾ ಸಾವು ಸಹ ಹೌದು. ಹೀಗಾಗಿ ಕಲಬುರಗಿ ಜನ ಭೀತಿಗೊಳಗಾಗಿದ್ದರೆ, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಸದ್ಯ ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಆತಂಕ ಕೊಂಚ ಕಡಿಮೆಯಾದರೂ ಪ್ರಕರಣಗಳು ಮಾತ್ರ ಇನ್ನೂ ಪತ್ತೆಯಾಗುತ್ತಲೇ ಇವೆ.
ಕಲಬುರಗಿಯಲ್ಲಿ ಅಂದು ಆಗಿದ್ದೇನು?
ದೇಶದಲ್ಲೇ ಮೊದಲ ಕೋವಿಡ್- 19 ಸಾವಿಗೆ ಕಲಬುರಗಿ ನಗರ ಸಾಕ್ಷಿಯಾಗಿದ್ದು ಇದೇ ದಿನ. ದೇಶದಲ್ಲಿ ಬಹುದೊಡ್ಡ ಮಟ್ಟದ ಆತಂಕ ಹುಟ್ಟುಹಾಕಿದ್ದ ಈ ಸಾವು ಸಂಭವಿಸಿ ವರ್ಷ ಪೂರೈಸುತ್ತಿದೆ. 76 ವರ್ಷದ ಮುಹಮ್ಮದ್ ಹುಸೇನ್ ಸಿದ್ದಕಿ ಸೌದಿ ಅರೇಬಿಯಾದಿಂದ ವಾಪಸ್ ಬಂದು ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಇವರ ಸ್ವಾಬ್ ಪರೀಕ್ಷೆಗೆ ಕಳುಹಿಸಿದಾಗ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಈ ವಿಷಯವನ್ನ ಅಂದಿನ ಆರೋಗ್ಯ ಸಚಿವ ಶ್ರೀ ರಾಮುಲು ಘೋಷಣೆ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದ ಸರ್ಕಾರ ಎಚ್ಚೆತ್ತು ಕೊಂಡಿತ್ತು. ಜಿಲ್ಲಾಧಿಕಾರಿ ಬಿ ಶರತ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಇದಾದ ಎರಡು ವಾರಗಳ ಬಳಿಕ ಲಾಕ್ಡೌನ್ ಸಹ ಘೋಷಣೆ ಆಗಿತ್ತು.
ಭಾರತವಷ್ಟೇ ಅಲ್ಲ, ದಕ್ಷಿಣ ಏಷಿಯಾ ಭಾಗದಲ್ಲೇ ಕಲಬುರಗಿಯಲ್ಲಾದ ಕೋವಿಡ್ ರೋಗಿಯ ಸಾವಿನ ಸಂಗತಿ ಆತಂಕ ಹುಟ್ಟುಹಾಕಿತ್ತಲ್ಲದೆ, ವಿಶ್ವಸಂಸ್ಥೆ ಸಹ ಕಲಬುರಗಿಯತ್ತ ಕಡೆ ಮುಖಮಾಡಿತ್ತು.
ಅಂದು – ಇಂದು
ಮಾರ್ಚ್ 8 ರಂದು ಕಾಣಿಸಿಕೊಂಡ ಕೊರೊನಾಗೆ ಜಿಲ್ಲೆಯಲ್ಲಿ ಇದುವರೆಗೂ 330 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 22183 ಪಾಸಿಟಿವ್ ಕೇಸ್ಗಳಿದ್ದರೆ, ಒಟ್ಟಾರೆ 3067 ಕಂಟೇನ್ಮೆಂಟ್ ಝೋನ್ಗಳನ್ನ ಮಾಡಲಾಗಿತ್ತು. ಈಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗಿದ್ದು, ಸಹಜ ಸ್ಥಿತಿಗೆ ಮರಳಿದೆ.
130 ಕೋಟಿ ಜನವಸತಿಯ ಭಾರತದಲ್ಲಿ ಕೋವಿಡ್- 19 ಸೋಂಕಿನ ಸಾವು ಸಂಭವಿಸಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಬಹುದೊಡ್ಡ ಸವಾಲು ಎಂಬ ಕಾರಣಕ್ಕಾಗಿ ವಿಶ್ವಸಂಸ್ಥೆಯವರು ಸತತ ಕಲಬುರಗಿ ಮೇಲೆ ಕಣ್ಣಿಟ್ಟಿತ್ತು. ಜಿಲ್ಲಾಡಳಿತವೂ ಈ ಬಗ್ಗೆ ತೀವ್ರ ಗಮನಹರಿಸಿತ್ತು.