ಆರು ತಿಂಗಳು ಚೇತರಿಕೆ ಅಸಾಧ್ಯ ಎಂದ ವೈದ್ಯರ ಮಾತಿಗೆ ಸವಾಲ್ ಅಂತೆ ಹುಷಾರಾದ ಮಹಾದೇವ ಸಾಹುಕಾರ ಭೈರಗೊಂಡ
ನಿಮಗೆ ತಲೆಗೆ ಪೆಟ್ಟಾಗಿದ್ದರಿಂದ ಒಂದು ವರ್ಷ ಮಾತು ಬರಲ್ಲ. ಕಾಲಿಗೆ ಪೆಟ್ಟಾಗಿದ್ದರಿಂದ ಆರು ತಿಂಗಳು ನಡೆಯಲು ಆಗಲ್ಲ ಎಂದು ಹೇಳಿದ್ದರು. ಆದರೆ, ಇದೀಗ ವೈದ್ಯರ ನಿರೀಕ್ಷೆಗೂ ಮೀರಿ ಮಹಾದೇವ ಸಾಹುಕಾರ ಭೈರಗೊಂಡ ಚೇತರಿಸಿಕೊಂಡಿದ್ದಾರೆ.
ವಿಜಯಪುರ (ಮಾ. 10): ನಿಮಗೆ ಒಂದು ವರ್ಷ ಮಾತು ಬರಲ್ಲ. 6 ತಿಂಗಳು ನಡೆಯಲು ಸಾಧ್ಯವೇ ಇಲ್ಲ. ಆದರೆ, ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ, ಇಂದು ಕೇವಲ ಮೂರೇ ತಿಂಗಳಲ್ಲಿ ಚೇತರಿಕೆ ಕಂಡು ವೈದ್ಯರಿಗೆ ಸವಾಲ್ ಮೂಡಿಸುತ್ತಿದ್ದಾರೆ ಮಹಾದೇವ ಸಾಹುಕಾರ ಭೈರಗೊಂಡ . ಕಳೆದ ವರ್ಷ ನ. 2 ರಂದು ಸುಮಾರು 40 ಜನರಿಂದ ದಾಳಿಗೊಳಗಾಗಿ, ಗುಂಡೇಟು ಮತ್ತು ಕಲ್ಲಿನೇಟಿನಿಂದ ಗಾಯಗೊಂಡು ಚಡಚಣ ತಾಲೂಕಿನ ಕೇರೂರ ಗ್ರಾಮದ ಮುಖಂಡ ಮಹಾದೇವ ಸಾಹುಕಾರ ಈಗ ಹುಷಾರಾಗಿದ್ದಾರೆ. ಶೂಟೌಟ್ ಬಳಿಕ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರು, ಮಹಾದೇವ ಸಾಹುಕಾರ ಭೈರಗೊಂಡ ಅವರ ದೇಹವನ್ನು ಹೊಕ್ಕಿದ್ದ ಮೂರು ಗುಂಡುಗಳನ್ನು ಹೊರಗೆ ತೆಗೆದಿದ್ದರು. ಬಳಿಕ ಹೈದರಾಬಾದಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಕೋಮಾದಲ್ಲಿದ್ದರು. ಹೈದರಾಬಾದಿನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ ವೈದ್ಯರು, ನಿಮಗೆ ತಲೆಗೆ ಪೆಟ್ಟಾಗಿದ್ದರಿಂದ ಒಂದು ವರ್ಷ ಮಾತು ಬರಲ್ಲ. ಕಾಲಿಗೆ ಪೆಟ್ಟಾಗಿದ್ದರಿಂದ ಆರು ತಿಂಗಳು ನಡೆಯಲು ಆಗಲ್ಲ ಎಂದು ಹೇಳಿದ್ದರು. ಆದರೆ, ಇದೀಗ ವೈದ್ಯರ ನಿರೀಕ್ಷೆಗೂ ಮೀರಿ ಮಹಾದೇವ ಸಾಹುಕಾರ ಭೈರಗೊಂಡ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ಆಸ್ಪತ್ರೆಗೆ ತೆರಳಿದಾಗ ಇವರನ್ನು ನೋಡಿ ಅಲ್ಲಿನ ವೈದ್ಯರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎಂದು ಮಹಾದೇವ ಸಾಹುಕಾರ ಭೈರಗೊಂಡ ತಿಳಿಸಿದ್ದಾರೆ.