ಕಲಬುರಗಿ : ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಒತ್ತಾಯಿಸಿ ದೆಹಲಿಯಲ್ಲಿ ಏ. 15ರಂದು ಬೃಹತ್ ಸಮಾವೇಶ
ಕಲಬುರಗಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ಏಪ್ರಿಲ್ 15ರಂದು ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಟೋಕರೆ ಕೋಲಿ, ಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಹರವಾಳ್ ಅವರು ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೋಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.
ಉದ್ಘಾಟನೆಯನ್ನು ಕೇಂದ್ರ ಸಚಿವೆ ಸಾದ್ವಿ ನಿರಂಜನಾ ಜ್ಯೋತಿ ಅವರು ನೆರವೇರಿಸುವರು. ಸಾನಿಧ್ಯವನ್ನು ತೊನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯಾ ಅವರು ವಹಿಸುವರು. ಅತಿಥಿಗಳಾಗಿ ಅಖಿಲ ಭಾರತೀಯ ಕೋಲಿ ಸಮಾಜದ ಅಧ್ಯಕ್ಷ ಕುವಾರ್ ಭಾಯಿ ಭಾವಲಿಯ, ಮಾಜಿ ಅಧ್ಯಕ್ಷ ಸತ್ಯನಾರಾಯಣ್ ಪವಾರ್, ಮುಂಬಯಿ ಕೋಲಿ ಮಹಾಸಂಘದ ಅಧ್ಯಕ್ಷರು ಹಾಗೂ ಮುಂಬಯಿ ರಾಜ್ಯ ವಿಧಾನ ಪರಿಷತ್ ಸದಸ್ಯ ರಮೇಶ್ ದಾದಾ ಪಾಟೀಲ್, ಹೈದ್ರಾಬಾದ್ ಮುದಿರಾಜ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕಸಾನಿ ಜ್ಞಾನೇಶ್ವರ್, ಸಂಸದ ಡಾ. ಉಮೇಶ್ ಜಾಧವ್, ಭಗವಂತ್ ಖೂಬಾ, ಗುಜರಾತ್ನ ಪ್ರವೀಣಭಾಯ್ ಕೋಲಿ, ಗುಜರಾತ್ ಪ್ರದೇಶ ಕೋಲಿ ಸಮಾಜದ ಅಧ್ಯಕ್ಷ ವಿಕ್ರಂಭಾಯಿ ಸೊರಾನಿ, ಅಖಿಲ ಭಾರತೀಯ ಕೋಲಿ ಸಮಾಜದ ಎಲ್ಲ ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಆಗಮಿಸುವರು ಎಂದು ಅವರು ವಿವರಿಸಿದರು.
ಸಮಸ್ತ ಕೋಲಿ ಸಮಾಜ ಬಾಂಧವರು ದೆಹಲಿ ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೊಷ್ಠಿಯಲ್ಲಿ ಕಾರ್ಯಾಧ್ಯಕ್ಷ ರೇವಣಸಿದ್ದಪ್ಪ ಹಲಚೇರಿಕರ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಸರಡಗಿ, ಸಹ ಕಾರ್ಯದರ್ಶಿ ದೇವಿಂದ್ರ ಜೈನಾಪೂರ ಮುಂತಾದವರು ಉಪಸ್ಥಿತರಿದ್ದರು.