ಪೈಲೆಟ್ ಯೋಜನೆ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ವಿರೋಧಿಸಿ ಪಾಲಿಕೆ ಮುಂದೆ ಪ್ರತಿಭಟನೆ

ಕಲಬುರಗಿ : ರಾಜೀವ್ ಆವಾಸ್ ಪೈಲೆಟ್ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ಆಗಿದ್ದು, ಉಳ್ಳವರಿಗೆ ಮನೆಗಳನ್ನು ಮಂಜೂರು ಮಾಡಿದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಪಾಲಿಕೆಯ ವ್ಯಾಪ್ತಿಯಲ್ಲಿನ ಜಾಫರಾಬಾದ್ ಗ್ರಾಮದ ಜಮೀನು ಸರ್ವೆ ನಂಬರ್ 21/1ರಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ರಾಜೀವ್ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿದ್ದು, ಸದರಿ ಮನೆಗಳನ್ನು ನಿಯಮಾವಳಿಗಳ ಪ್ರಕಾರ ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಉಪಯೋಗಿಸದೇ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ನೀರಿನ ಕ್ಯೂರಿಂಗ್ ಹಾಗೂ ಇನ್ನಿತರ ನಿಯಮಗಳನ್ನು ಪಾಲಿಸದೇ ಸರ್ಕಾರದ ನೀತಿ, ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ನಿರ್ಮಿಸಿದ್ದು, ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಂಭವ ಇದೆ. ಇದರಿಂದಾಗಿ ಮಾನವ ಕುಲಕ್ಕೆ ಗಂಡಾಂತರ ಹಾಗೂ ಅಪಾಯಗಳೂ ಸಂಭವಿಸುವ ಅವಕಾಶಗಳು ಇವೆ. ಸದರಿ ನಿರ್ಮಿಸಲಾದ ಮನೆಗಳನ್ನು ಈಗಾಗಲೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆಯವರು ಸರ್ಕಾರದ ಮಾರ್ಗಸೂಚಿ ಹಾಗೂ ನೀತಿ ನಿಯಮಗಳನ್ನು ಹಾಗೂ ಅರ್ಹ ಕಡುಬಡವ ನಗರವಾಸಿ ಫಲಾನುಭವಿಗಳಿಗೆ ಮೀಸಲಿರಿಸಿದ ಸದರಿ ಮನೆಗಳನ್ನು ಹಂಚಿಕೆಯಲ್ಲಿ ಭಾರೀ ಅವ್ಯವಹಾರ ಹಾಗೂ ಸ್ವಜನಪಕ್ಷಪಾತ ಎಸಗಿ ಉಳ್ಳವರು ಹಾಗೂ ದೊಡ್ಡ ದೊಡ್ಡ ಬಂಗ್ಲೆ ಹಾಗೂ ಆಸ್ತಿಗಳನ್ನು ಹೊಂದಿರುವ ಶ್ರೀಮಂತರಿಗೆ ಹಾಗೂ ಎಪಿಎಲ್ ಕಾರ್ಡ್‍ಗಳನ್ನು ಹೊಂದಿದವರಿಗೆ ಹಂಚಿಕೆ ಮಾಡುವುದರ ಮೂಲಕ ಭಾರೀ ಪ್ರಮಾಣದಲ್ಲಿ ಲಂಚ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
ಈ ಕುರಿತು ಲಿಖಿತ ದೂರು ಸಲ್ಲಿಸಿದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಲ್ಲಿ ರಾಜಕೀಯ ವ್ಯಕ್ತಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಗರದ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡದೇ ಕೋಟ್ಯಾಂತರ ರೂ.ಗಳ ಅವ್ಯವಹಾರ ಎಸಗಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದೇ ಹೋದಲ್ಲಿ ಪಾಲಿಕೆಗೆ ಮುತ್ತಿಗೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ತಾಲ್ಲೂಕು ಅಧ್ಯಕ್ಷ ಪುನಿತರಾಜ್ ಸಿ. ಕವಡೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ನಿಸಾರ್ ಅಹ್ಮದ್ ಖಾನ್, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಆನಂದ್ ಎಸ್. ದೊಡ್ಡಮನಿ, ವಸೀಮ್ ಆಕ್ರಮ್ ಮುಂತಾದವರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *