Maha Shivaratri 2021: ಇಂದು ಎಲ್ಲೆಡೆ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ; ಈಶ್ವರನ ದರ್ಶನ ಪಡೆಯುತ್ತಿರುವ ಭಕ್ತರು
ಬೆಂಗಳೂರು(ಮಾ.11): ಇಂದು ಎಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಿವರಾತ್ರಿ ಹಬ್ಬದ ವಾತಾವತಣ ಕಳೆಗಟ್ಟಿದೆ. ಹಬ್ಬದ ಹಿನ್ನೆಲೆ, ನಗರದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಾಘ ಮಾಸದ ಬಹುಳ ಚತುದರ್ಶಿಯಂದು ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
ಬೆಂಗಳೂರಿನ ಕಾಡು ಮಲ್ಲೇಶ್ವರಂ, ಗವಿಗಂಗಾದರೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಅದ್ದೂರಿ ಆಚರಣೆ ಮನೆಮಾಡಿದೆ. ಜಲಾಭಿಷೇಕ, ಪಂಚವೃತಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ಶಿವನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಉಪವಾಸ ಹಾಗೂ ಜಾಗರಣೆ ಈ ಹಬ್ಬದ ವಿಶೇಷತೆಗಳಾಗಿವೆ.
ಕಾಡುಮಲ್ಲೇಶ್ವರಂ ಶಿವ ಸನ್ನಿಧಿಯಲ್ಲಿ ಪೂಜೆ ಕಾರ್ಯಗಳು ಮುಂದುವರೆದಿವೆ. ಎಲ್ಲೆಡೆ ಓಂ ನಮಃ ಶಿವಾಯ ಜಪ ಮೊಳಗಿದೆ. ಶಂಕಕರನ ಭಕ್ತರು ಸಾಲು-ಸಾಲಾಗಿ ಶಿವನೆಡೆಗೆ ಸಾಗುತ್ತಿದ್ದಾರೆ.
ಕಾಡುಮಲ್ಲೇಶ್ವರಂ ದೇವಸ್ಥಾನದಲ್ಲಿ ಎಲ್ಲಾ ರೀತಿಯ ಮುನ್ನಚ್ಚೆರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬರುವ ಎಲ್ಲಾ ಶಿವ ಭಕ್ತರಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಇಡೀ ದೇವಾಲಯ ತಳಿರು-ತೋರಣ ಹಾಗೂ ಕಬ್ಬು, ಹೂವಿನಿಂದ ಅದ್ದೂರಿ ಅಲಂಕಾರದಿಂದ ಸಿಂಗಾರಗೊಂಡಿದೆ. ಕಾಡುಮಲ್ಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡಲಾಗುತ್ತಿದೆ.
ಭಕ್ತರು ಬೆಳಗ್ಗಿನಿಂದಲೇ ಶಿವನ ದರ್ಶನ ಪಡೆಯುತ್ತಿದ್ದಾರೆ. ಇಡೀ ದಿನ ದೇವಾಲಯದಲ್ಲಿ ಶಿವನಿಗೆ ಪೂಜೆ, ಅಭಿಷೇಕ ಇರುತ್ತದೆ. ರಾತ್ರಿ ಜಾಗರಣೆ ಹಿನ್ನೆಲೆ, ನಾಳೆ ಬೆಳಗ್ಗೆಯವರೆಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.