ಜೆಡಿಎಸ್‌ನಿಂದ ಹೋಗೋರ್‌ ಹೋಗಲಿ..! ದೇವೇಗೌಡರ ಬೆನ್ನಿಗೆ ಚೂರಿ ಹಾಕೋದು ಹೊಸದೇನಲ್ಲ: ಎಚ್‌ಡಿಕೆ ಕಿಡಿ

ಹೈಲೈಟ್ಸ್‌:

  • ಜೆಡಿಎಸ್‌ ಪಕ್ಷದ ಬಾಗಿಲು ತೆರೆದಿದೆ, ಹೋಗೋರ್‌ ಹೋಗಬಹುದು ಎಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ
  • ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಹಳಬರು ಹೋದರೆ ಹೊಸಬರು ಬರ್ತಾರೆ ಎಂದ ಮಾಜಿ ಸಿಎಂ ಎಚ್‌ಡಿಕೆ
  • ಮೈಸೂರಿನಲ್ಲಿ ಮಾತನಾಡಿ ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೇ ವಿಚಾರ ಎಂದ ಮಾಜಿ ಮುಖ್ಯಮಂತ್ರಿ

ಮೈಸೂರು: ಜೆಡಿಎಸ್‌ ಪಕ್ಷದ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ಈ ಮೂಲಕ ಪಕ್ಷ ತೊರೆಯುತ್ತಿರುವ ಮಧು ಬಂಗಾರಪ್ಪ ಅವರಿಗೆ ಮಾಜಿ ಸಿಎಂ ತಿರುಗೇಟು ನೀಡಿದರು.

ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ. ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ. ಅವರಿಗೆ ಲಾಭ ಆಗುತ್ತೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೇಗೌಡರು ಯಾರನ್ನು ಬೆಳೆಸಿದ್ದಾರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋಗಬೇಕಾದರೆ ಏನೇನೊ ಒಂದು ಸಬೂಬು ಹೇಳಿಕೊಂಡು ಹೋಗ್ತಾರೆ. ಅದೇ ರೀತಿ ಕಾರ್ಯಕರ್ತರನ್ನು ಬೆಳೆಸುವ ಶಕ್ತಿ ಜೆಡಿಎಸ್‌ಗೆ ಇದೆ. ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರ. ಇನ್ಮುಂದೆ ಪಕ್ಷ ನಿಷ್ಠೆ ಇಲ್ಲದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಈ ಹಿಂದೆ ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಕೆಲವು ತಪ್ಪುಗಳಾಗಿವೆ ಎಂದರು.
ಮುಂದೆ ಪಕ್ಷ ಸಂಘಟನೆಯೊಂದೇ ಗುರಿ. ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುತ್ತೇವೆ. ರಾಜ್ಯದ ಜನತೆ ಪರವಾಗಿ ಪಕ್ಷ ಎಂದಿಗೂ ಕೆಲಸ ಮಾಡುತ್ತದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಮಹಾಶಿವರಾತ್ರಿ ಹಿನ್ನೆಲೆ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ಎಚ್‌ಡಿ ಕುಮಾರಸ್ವಾಮಿ ದೇವಿ, ನಂಜುಡೇಶ್ವರನ ದರ್ಶನ ಪಡೆದರು. ಮಾಜಿ ಮುಖ್ಯಮಂತ್ರಿಗಳಿಗೆ ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ, ಶಾಸಕ ಸಾರಾ ಮಹೇಶ್ ಹಾಗೂ ಸ್ಥಳೀಯ ಜೆಡಿಎಸ್ ನಾಯಕರು ಸಾಥ್ ನೀಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *