ಡಿಸಿಎಂ ‘ಅಶ್ವತ್ಥನಾರಾಯಣ ಮುಖ್ಯಮಂತ್ರಿ ಆಗಲಿ ‘: ಸಚಿವ ಡಿ.ವಿ.ಸದಾನಂದಗೌಡ
ಬೆಂಗಳೂರು: ”ಅತ್ಯುತ್ತಮ ಕರ್ತವ್ಯ ಪ್ರಜ್ಞೆ ಹಾಗೂ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣರ ಪದವಿ ಮುಂದಿರುವ ‘ಉಪ’ ಹೋಗಿ ಆದಷ್ಟು ಬೇಗ ‘ಮುಖ್ಯಮಂತ್ರಿ’ ಎಂಬ ಪದನಾಮ ಬರುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ಕೃಪೆ-ಚೈತನ್ಯವನ್ನು ಆ ಪರಮಶಿವ ನೀಡಲಿ,” ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಶಿಸಿದರು.
ಮಲ್ಲೇಶ್ವರದಲ್ಲಿಗುರುವಾರ ರಾತ್ರಿ ಡಾ.ಸಿ.ಎನ್ .ಅಶ್ವತ್ಥನಾರಾಯಣ ಫೌಂಡೇಷನ್ ಆಯೋಜಿಸಿದ್ದ ಮಹಾ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ”ನಮ್ಮ ನಡುವಿನ ರಾಜಕಾರಣಿಗಳಲ್ಲಿ ಮಾತನಾಡುವವರೇ ಜಾಸ್ತಿ. ಇದಕ್ಕೆ ಅಶ್ವತ್ಥನಾರಾಯಣ ಅಪವಾದ. ಅವರದ್ದು ಮಾತು ಕನಿಷ್ಠ, ಕೆಲಸ ಗರಿಷ್ಠ ಎನ್ನುವ ನೀತಿ. ಈ ಪರಿಶ್ರಮವೇ ಅವರನ್ನು ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ,” ಎಂದರು.
ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅತಿಥಿಗಳನ್ನು ಸ್ವಾಗತಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ವೆಂಕಟೇಶ್, ನಿವೃತ್ತ ಪೋಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.