ಅಪರಾಧ ಕೃತ್ಯಗಳಿಗೆ ಕಡಿವಾಣ: ಕಲಬುರಗಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾ ಅಳವಡಿಕೆ
ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಸಿಸಿಟಿವಿ ಕ್ಯಾಮರಾಗಳ ಪಾತ್ರ ಕೂಡ ಮಹತ್ವದ್ದು. ಇದೇ ಕಾರಣಕ್ಕಾಗಿ ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ – 2017ರ ಅಡಿ ವಾಣಿಜ್ಯೋದ್ಯಮ, ಜನನಿಬಿಡ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಕಲಬುರಗಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ.
ದಿನದಿಂದ ದಿನಕ್ಕೆ ಗಣನೀಯವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ 55 ಪಾಲಿಕೆ ವಾರ್ಡ್ಗಳಿದ್ದು, ಸುಮಾರು 8 ಲಕ್ಷ ಜನತೆ ನಗರದಲ್ಲಿ ವಾಸವಿದ್ದಾರೆ. ಈ ಹಿಂದೆ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳು ಹಳೆಯದಾಗಿದ್ದು, ಬಹುತೇಕ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ.ಸಿಸಿಟಿವಿ ಕ್ಯಾಮರಾ ಅಳವಡಿಕೆ – ಅಧಿಕಾರಿ, ಸ್ಥಳೀಯರ ಪ್ರತಿಕ್ರಿಯೆಇದೀಗ ನಗರ ಪೊಲೀಸ್ ಆಯುಕ್ತರ ಸಲಹೆ ಮೇರೆಗೆ ಸಂಚಾರಿ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ನಗರದ ಪ್ರಮುಖ ರಸ್ತೆಗಳಾದ ಸೂಪರ್ ಮಾರ್ಕೆಟ್, ಸರ್ದಾರ್ ಪಟೇಲ್ ವೃತ್ತ, ಜಗತ್ ಕ್ರಾಸ್, ರಾಷ್ಟ್ರಪತಿ ಚೌಕ್, ಕೇಂದ್ರ ಬಸ್ ನಿಲ್ದಾಣ ಸೇರಿ 13 ಕಡೆಗಳಲ್ಲಿ ಡಿಜಿಟಲ್ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಘಟಕ ತೆರೆದು, ಇಲ್ಲಿಂದಲೇ 13 ಸಿಸಿಟಿವಿ ಕ್ಯಾಮರಾಗಳ ಮೂಲಕ ನಗರದಲ್ಲಿನ ಆಗುಹೋಗುಗಳು ಮತ್ತು ರಸ್ತೆ ಸಂಚಾರ ವೀಕ್ಷಣೆ ಮಾಡಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ನಿಯಮಗಳ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ವೈರಲೈಸ್ ಮೂಲಕ ಮಾಹಿತಿ ನೀಡಿ ತಡೆಯುವ ಕಾರ್ಯ ಪೊಲೀಸ್ ಇಲಾಖೆ ಮಾಡುತ್ತಿದೆ.
ಇದಲ್ಲದೇ ಜನರ ಸುರಕ್ಷತೆಗೋಸ್ಕರ ಪ್ರಮುಖ ಬಡಾವಣೆಗಳಲ್ಲಿ 53 ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ವಾಣಿಜ್ಯೋದ್ಯಮಿಗಳಿಗೆ ಜಾಗೃತಿ ಮೂಡಿಸಲಾಗಿದ್ದು, ನಗರದ 1,000ಕ್ಕೂ ಅಧಿಕ ವ್ಯಾಪಾರಸ್ಥರು ಕ್ಯಾಮರಾ ಅಳವಡಿಸಿಕೊಂಡಿದ್ದಾರೆ. ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿ ಪ್ರತಿಯೊಂದು ಶಾಲಾ-ಕಾಲೇಜು, ಬಾರ್-ರೆಸ್ಟೋರಂಟ್ ಸೇರಿ ಪ್ರಮುಖ ಖಾಸಗಿ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಿಕೊಂಡಿರುವಂತೆ ನೋಡಿಕೊಳ್ಳಲಾಗುತ್ತಿದೆ.ದೇವಸ್ಥಾನ, ಚರ್ಚ್, ದರ್ಗಾದಂತಹ ಧಾರ್ವಿಕ ಸ್ಥಳಗಳ ಆಡಳಿತ ಮಂಡಳಿಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಪೊಲೀಸ್ ಇಲಾಖೆ ಪ್ರೇರೇಪಿಸಿ ಕ್ರಮ ಕೈಗೊಳ್ಳುತ್ತಿದೆ. ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿಕೊಳ್ಳದವರ ವಿರುದ್ಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ಡಿಸಿಪಿ ಕಿಶೋರ ಬಾಬು ನೀಡಿದ್ದಾರೆ.ಸದ್ಯ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಇನ್ನೂ ಹಲವೆಡೆ ಕ್ಯಾಮರಾಗಳ ಅಳವಡಿಕೆಗೆ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಕಾರ್ಯ ನಡೆಯಲಿದೆ.