ಕಲಬುರಗಿ : ಹಳೆಯ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ
ಕಲಬುರಗಿ : ಹಳೆಯ ಕಟ್ಟಡವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಕುರಿತು ಶುಕ್ರವಾರ ಬೆಳಿಗ್ಗೆ ವರದಿಯಾಗಿದೆ. ಸ್ಥಳೀಯರು ತಕ್ಷಣವೇ ಬೆಂಕಿಯನ್ನು ಶಮನಗೊಳಿಸಿದ್ದರಿಂದ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ.
ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ಹಳೆಯ ವಾಣಿಜ್ಯಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಕಿಯು ಮತ್ತೆ ಬೇರೆ ಕಡೆ ಹರಡದಂತೆ ನೋಡಿಕೊಂಡ ಸ್ಥಳೀಯರು ತಕ್ಷಣವೇ ನೀರು ಹಾಕುವ ಮೂಲಕ ಬೆಂಕಿಯನ್ನು ಶಮನಗೊಳಿಸಿದರು. ಇದರಿಂದ ಬೆಂಕಿ ಅಕ್ಕ, ಪಕ್ಕದ ಅಂಗಡಿಗಳಿಗೆ ವ್ಯಾಪಿಸುವುದಕ್ಕೆ ತಡೆಯೊಡ್ಡಿದರು.
ದಟ್ಟವಾದ ಹೊಗೆಯಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಬಿಸಿಲಿನ ತಾಪವೂ ಹೆಚ್ಚುತ್ತ ಇರುವುದರಿಂದ ಹಳೆಯ ಕಟ್ಟಡದಲ್ಲಿ ಯಾರಾದರೂ ಬೀಡಿ, ಸಿಗರೇಟ್ ಸೇರಿ ಒಗೆದ ಪರಿಣಾಮವೇ ಈ ರೀತಿಯ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ.