ಕಲಬುರಗಿ : ಕೊಳಚೆ ನಿವಾಸಿಗಳಿಗೆ ಬಜೆಟ್‍ನಲ್ಲಿ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆ

ಕಲಬುರಗಿ::ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರಾಜ್ಯ ಬಜೆಟ್‍ನಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಶುಕ್ರವಾರ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021-2022ನೇ ಸಾಲಿನ ಬಜೆಟ್ ಮಂಡಿಸಿದ್ದು, ಒಟ್ಟು ಬಜೆಟ್ 2.5 ಲಕ್ಷ ಕೋಟಿ ಗಾತ್ರದಲ್ಲಿ ನಗರ ಪ್ರದೇಶದಲ್ಲಿರುವ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನೀಡಿರುವ ಪಾಲು ಜನಸಂಖ್ಯೆಗೆ ಅನುಗುಣವಾಗಿ ನೀಡದೇ ನಿರಾಶದಾಯಕ ಬಜೆಟ್ ಮಂಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಾಲಿನ ಬಜೆಟ್ ಇಲಾಖಾವಾರುಗಳಲ್ಲಿದೆ. ಮಹಿಳಾ ದಿನಾಚರಣೆ ಅಂಗವಾಗಿ ವಲಯವಾರು ವಿಂಗಡಿಸಿ ವಲಯ 1ರಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆ, ವಲಯ 2ರಲ್ಲಿ ಸರ್ವೋದಯ, ಕ್ಷೇಮಾಭಿವೃದ್ಧಿ ವಲಯ, ಮೂರರಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಚೋಚನೆ, ನಾಲ್ಕರಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯ, ಐದರಲ್ಲಿ ಸಂಸ್ಕøತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯ, ಆರರಲ್ಲಿ ಆರ್ಥಿಕ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು 2.46.207 ಕೋಟಿ ರೂ.ಗಳ ಗಾತ್ರದ ಬಜೆಟ್‍ನಲ್ಲಿದ್ದು, ಕೊಳಚೆ ಪ್ರದೇಶಗಳ ಮಹಿಳೆಯರ ಸುರಕ್ಷತೆ, ಆರೋಗ್ಯ, ಶೌಚಾಲಯ ವ್ಯವಸ್ಥೆಗಳನ್ನು ಘೋಷಿಸಿಲ್ಲ ಎಂದು ಅವರು ದೂರಿದರು.
ವಸತಿ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಎಷ್ಟು ಹಣವನ್ನು ಒದಗಿಸಲಾಗಿದೆ ಎಂಬ ಸ್ಪಷ್ಟತೆ ಇಲ್ಲ. ವಲಯ 2ರ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಆದ್ಯತೆಯಲ್ಲಿ ನಗರ ಪ್ರದೇಶದ ಶೇಕಡಾ 40ರಷ್ಟು ಜನರಿರುವ ಸ್ಲಂ ನಿವಾಸಿಗಳ ಕ್ಷೇಮಾಭಿವೃದ್ಧಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಅವರು ಆರೋಪಿಸಿದರು.
ವಲಯ 3ರಲ್ಲಿ ಆರ್ಥಿಕ ಅಭಿವೃದ್ಧಿ ಪ್ರಚೋದನೆ ವಲಯದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಣ ಮೀಸಲಿರಿಸದೇ ರಾಜ್ಯದಲ್ಲಿ ಬಲಾಢ್ಯ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಿ ಅಳವಿನಂಚಿನಲ್ಲಿರುವ ಸಣ್ಣಪುಟ್ಟ ಅಸ್ಪøಶ್ಯ ಸಮುದಾಯಗಳನ್ನು ಮತ್ತು ಅಲೆಮಾರಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ದೂರಿದರು.
ಬಜೆಟ್ ಪೂರ್ವದಲ್ಲಿ ಸರ್ಕಾರಕ್ಕೆ ಕೊಳಚೆ ಪ್ರದೇಶಗಳ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿರುವ 2,800 ಘೋಷಿತ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಖಾಸಗಿ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳ ಭೂ ಸ್ವಾಧೀನಕ್ಕೆ 1000 ಕೋಟಿ ರೂ.ಗಳನ್ನು ನೀಡಲು ಒತ್ತಾಯಿಸಿ, ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನಿರ್ಮಿಸುವ ಮನೆಗಳ ಘಟಕ ವೆಚ್ಚವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲು, ನಗರ ಪ್ರದೇಶಗಳ ಬಡ ನಿವೇಶನ, ವಸತಿ ರಹಿತರಿಗೆ ವಸತಿ ಕಲ್ಪಿಸಲು ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿಗೊಳಿಸಲು ಒತ್ತಾಯಿಸಲಾಗಿತ್ತು. ಎಲ್ಲ ಅಂಶಗಳನ್ನು ಪರಿಗಣಿಸದೇ ಇರುವುದು ಬಿಜೆಪಿ ಸರ್ಕಾರ ಬಡಜನವಿರೋಧಿ ಎಂಬುದನ್ನು ಬಹಿರಂಗಪಡಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಸಾರ್ವಜನಿಕರಿಗೆ ಸರ್ಕಾರ ತುಂಬಾ ಬರೆ ಎಳೆಯುತ್ತಿದೆ. ಅದರಲ್ಲಿ ಪೆಟ್ರೋಲ್, ಡೀಸೆಲ್, ತರಕಾರಿ, ಹಣ್ಣುಗಳು, ಗ್ಯಾಸ್, ಅಡಿಗೆ ಎಣ್ಣೆ ಮುಂತಾದ ಆಹಾರ ಸಾಮಗ್ರಿಗಳು ಬೆಲೆ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸುನೀತಾ ಕೊಲ್ಲೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಚಾಲಕರಾದ ಶ್ರೀಮತಿ ರೇಣುಕಾ ಸರಡಗಿ, ಕಾರ್ಯದರ್ಶಿ ವಿಕಾಸ್ ಸವಾರಿಕರ್, ಉಪಾಧ್ಯಕ್ಷೆ ಶ್ರೀಮತಿ ಸಂಗೀತಾ ತಳವಾರ್, ಸಹ ಕಾರ್ಯದರ್ಶಿ ಶ್ರೀಮತಿ ರಾಶಿ ರಾಠೋಡ್, ಖಜಾಂಚಿ ಸುನೀಲ್ ಕರಹರಿ, ಗೌರಮ್ಮ ಮಾಕಾ, ಶಾರದಾ ಮುಂತಾದವರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *