ಕಲಬುರಗಿ : ಇಟಗಾ ಚರ್ಚನಲ್ಲಿ ಹಲ್ಲೆ ಖಂಡಿಸಿ ಕ್ರೈಸ್ತ ಒಕ್ಕೂಟದಿಂದ ಪ್ರತಿಭಟನೆ
ಕಲಬುರಗಿ : ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಟಗಾ ಗ್ರಾಮದ ಮೆಥೋಡಿಸ್ಟ್ ಚರ್ಚ್ನಲ್ಲಿ ಪ್ರವೇಶಿಸಿ ಪ್ರಾರ್ಥನೆಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಕೆಲವು ಕಿಡಿಗೇಡಿಗಳ ವಿರುದ್ಧ ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಶುಕ್ರವಾರ ಮಾನವ ಹಕ್ಕುಗಳಿಗಾಗಿ ಅಖಿಲ ಕರ್ನಾಟಕ ಕ್ರೈಸ್ತ ಒಕ್ಕೂಟ (ಈಶಾನ್ಯ ವಲಯ) ಕಾರ್ಯಕರ್ತರು ಪೋಲಿಸ್ ಭವನ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಫೆಬ್ರವರಿ 27ರಂದು ಸಂಜೆ 7-45ರ ಸುಮಾರಿಗೆ ಇಟಗಾ ಗ್ರಾಮದ ಚರ್ಚ್ನಲ್ಲಿ ಪ್ರಾರ್ಥನೆ ಮಾಡುವಾಗ ಕೆಲ ಕಿಡಿಗೇಡಿಗಳು ಚರ್ಚನೊಳಗೆ ನುಗ್ಗಿ ಹಲ್ಲೆ ಮಾಡಿದ ಅಪರಾಧ ಎಸಗಿದ್ದಾರೆ ಎಂದು ದೂರಿದರು.
ಧರ್ಮಕ್ಕೆ ಅಪಮಾನ ಮಾಡುವ ಉದ್ದೇಶದಿಂದ ಮತ್ತು ಪ್ರಾರ್ಥನೆ ಸ್ಥಾನಕ್ಕೆ ಚ್ಯುತಿ ಮಾಡುವುದು ಅಪವಿತ್ರಗೊಳಿಸುವುದನ್ನು ಮಾಡಿದ್ದಾರೆ. ಕೆಲವು ಹೆಣ್ಣು ಮಕ್ಕಳ ಮೇಲೆ ಆಯುಧಗಳಿಂದ ಚುಚ್ಚಿ ಗಾಯಗೊಳಿಸಿ ಮರಣವನ್ನುಂಟು ಮಾಡುವ ಸಂಭವ ಅಲ್ಲದೇ ಅವರ ಮೇಲೂ ಸಹ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಸಹ ಮಾಡಿದ್ದಾರೆ. ಚರ್ಚ್ ಸಭಾಪಾಲಕ ಸ್ಯಾಮುವೆಲ್ ಡಿ. ಅವರ ಮೇಲೆ ಹಲ್ಲೆ ಮಾಡಿ ರಕ್ತಗಾಯಗೊಳಿಸಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಈಗಾಗಲೇ ಪೋಲಿಸ್ ಇಲಾಖೆಯಿಂದ ಎಫ್ಐಆರ್ ಆಗಿದ್ದು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ ಹಾಗೂ ಆರೋಪಿಗಳನ್ನು ಬಂಧಿಸಿಲ್ಲ. ಆದ್ದರಿಂದ ಕೂಡಲೇ ಇಟಗಾ ಗ್ರಾಮದ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಮೆಯಾನ್ ಸ್ಯಾಮುವೆಲ್, ಫಾದರ್ ಪರಶುರಾಮ್, ರೆವರೆಂಡ್ ಸುಮಂತ್ ಡಿ. ಸರಡಗಿ, ಫಾದರ್ ಸ್ಟ್ಯಾನಿ ಲೋಬೊ, ಮೌಲಾ ಮುಲ್ಲಾ, ಎಸ್. ರಾಜು, ಲೋಯಿಸ್ ಕೋರಿ, ಪ್ರಸನ್ನ, ಪುಷ್ಪಲತಾ, ಅಂಬಿಕಾ, ಆಂಟೋನಿ, ವಿಜಯಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.