ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣವಾಗಿಲ್ಲ: ಡಾ.ಸುಧಾಕರ್
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಮತ್ತೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ಅಂತಹ ಪರಿಸ್ಥಿತಿ ಬರದೆ ಇರಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಆ ಪರಿಸ್ಥಿತಿ ಬರದೆ ಇರಲು ಸಿಎಂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಲಸಿಕೆ ನೀಡುವ ಕುರಿತು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ವಿದುರಾಶ್ವತ್ಥವನ್ನು ಅಂತರಾಷ್ಟ್ರೀಯ ಸ್ಮರಣಾ ಕೇಂದ್ರವಾಗಿ ರೂಪಿಸಬೇಕು. ವಿದುರಾಶ್ವತ್ಥದಲ್ಲಿ 1938ರಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಬ್ರಿಟಿಷರು ಗುಂಡಿನ ದಾಳಿ ನಡೆಸಿ ಅಧಿಕೃತವಾಗಿ 09 ಮಂದಿ ಹೋರಾಟಗಾರರು ಹುತಾತ್ಮರಾದರು. ಆದರೆ ಅದು ಅನಧಿಕೃತವಾಗಿ 30ಕ್ಕೂ ಹೆಚ್ಚು ಮಂದಿ ಎಂದು ಹೇಳಲಾಗುತ್ತದೆ. ಈ ಸ್ಥಳಕ್ಕೆ ವಿದುರ ಬಂದು ಅಶ್ವತ್ಥಕಟ್ಟೆ ನಿರ್ಮಿಸಿದರು ಎಂಬ ಹಿನ್ನೆಲೆ ಇದೆ. ಇಲ್ಲಿ ನಾಗಪೂಜೆ ಕೂಡ ನಡೆಯುತ್ತಿದೆ. ಹೀಗಾಗಿ ಇದನ್ನು ಐತಿಹಾಸಿಕ, ಧಾರ್ಮಿಕ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.