ಪಶ್ಚಿಮ ಬಂಗಾಳ:ಸೋನಿಯಾ, ಸಿಂಗ್, ಖರ್ಗೆ ಸೇರಿ 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭೆಗೆ ಈ ತಿಂಗಳ 27ರಿಂದ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ,ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಸೇರಿದಂತೆ 30 ನಾಯಕರ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಹಂತದ ವಿಧಾನಸಭಾ ಚುನಾವಣೆ 30 ಕ್ಷೇತ್ರಗಳಿಗೆ ಪಶ್ಚಿಮಬಂಗಾಳದಲ್ಲಿ ಈ ತಿಂಗಳ 27ರಂದು ನಡೆಯಲಿದೆ ಹೀಗಾಗಿ ಎಲ್ಲ ನಾಯಕರು ಪಶ್ಚಿಮಬಂಗಾಳದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರು ಪಶ್ಚಿಮಬಂಗಾಳ ವಿಧಾನಸಭೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಯಾವುದೇ ಸಮಯ ಸಮಾರಂಭದಲ್ಲಿ ಕಾಣಿಸಿಕೊಳ್ಳದೆ ದೂರ ಉಳಿದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆಯಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ