ಕಲಬುರಗಿ ; ಬೆಂಬಲ ಬೆಲೆಗೆ ಆಗ್ರಹಿಸಿ ಮಾ.15ರಂದು ತೊಗರಿಯೊಂದಿಗೆ ಧರಣಿ
ಕಲಬುರಗಿ ; ತೋಗರಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ಕ್ವಿಂಟಾಲ್ಗೆ 8000 ರೂ.ಗಳಂತೆ ಖರಿದಿಸುವಂತೆ ಆಗ್ರಹಿಸಿ ಇದೇ ಮಾ.15ರಂದು ಡಿಸಿ ಕಚೇರಿ ಎದುರು ತೋಗರಿಯೊಂದಿಗೆ ರೈತರು ಧರಣಿ ಕೈಗೊಳ್ಳಲಿದ್ದಾರೆ.
ಕಳೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, 8000 ರೂ.ಗಳಂತೆ ಬೆಂಬಲ ಬೆಲೆಯಲ್ಲಿ ತೋಗರಿಯನ್ನು ಖರಿದಿಸಲಾಗುವುದು ಎಂದು ನೀಡಿದ ಭರವಸೆ ಇಲ್ಲಿಯವರೆಗೂ ಚಾರಿಯಾಗಿಲ್ಲ. ಈ ಸಲ 5 ಲಕ್ಷ ಕ್ವಿಂಟಾಲ್ ಮಾತ್ರ ತೋಗರಿ ಬೆಳೆ ಇಳುವರಿಯಾಗಿದೆ, ಕಳೆದ ವರ್ಷ 11 ಲಕ್ಷ ಕ್ವಿಂಟಾಲ್ ಬೆಳೆಯಲಾಗಿತ್ತು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಐಕ್ಯಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಮಾ.15ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ತೋಗರಿಗೆ ಬೆಂಬಲ ಬೆಲೆನೀಡುವಂತೆ ಆಗ್ರಹಿಸಿ ಹಾಗೂ ಕೇಂದ್ರ ರಾಜ್ಯ ಸರ್ಕಾರಗಳ ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಿ ತೋಗರಿಯೊಂದಿಗೆ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಜಂಟಿ ಸುದ್ದಿಗೊಷ್ಠಿಯಲ್ಲಿಂದು ಮಾಜಿ ಶಾಸಕ ಬಿ.ಆರ್.ಪಾಟೀಲ, ಶೌಕತ ಅಲಿ ಆಲೂರ, ಎಸ್.ಆರ್.ಕೊಲ್ಲೂರ, ಮಹೇಶ ಎಸ್.ಬಿ, ಶ್ಯಾಮ ನಾಟೀಕರ, ಉಮಾಪತಿ ಮಾಲಿಪಾಟೀಲ, ವಿಶ್ವನಾಥ ಸಿಂಗೆ ಅವರು ಈ ವಿಷಯ ತಿಳಿಸಿದರು.