ಮುಂದುವರಿದ ಶಿವಸೇನೆ ಪುಂಡಾಟಿಕೆ: ಗಡಿಭಾಗದ 458 ಬಸ್ ಸಂಚಾರ ಸ್ಥಗಿತ!
ಹೈಲೈಟ್ಸ್:
- ಮಹಾರಾಷ್ಟ್ರ ಗಡಿಯಲ್ಲಿ ಮತ್ತೆ ಹಿಂಸಾಚಾರಕ್ಕಿಳಿದ ಶಿವಸೇನೆ ಪುಂಡರು
- ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಕಲ್ಲು ತೂರಾಟ
- ದಾಂದಲೆಯ ಆರೋಪಗಳನ್ನು ಸ್ಥಳೀಯ ಕನ್ನಡಿಗರ ಮೇಲೆ ಹೇರಿದ ಶಿವಸೇನೆ
ಬೆಳಗಾವಿ: ಮಹಾರಾಷ್ಟ್ರ- ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ವಿಷಬೀಜ ಬಿತ್ತುವಲ್ಲಿ ನಿರತವಾಗಿರುವ ಶಿವಸೇನೆ ಮತ್ತು ಎಂಇಎಸ್ ಪುಂಡರು ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿದ್ದಾರೆ.
ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಕಲ್ಲು ತೂರಿ ಬಸ್ಸುಗಳ ಕಿಟಕಿ ಗಾಜುಗಳನ್ನು ಜಖಂ ಗೊಳಿಸಿದ್ದಾರೆ. ಈ ದಾಂದಲೆಯ ಆರೋಪಗಳನ್ನು ಸ್ಥಳೀಯ ಕನ್ನಡಿಗರ ಮೇಲೆ ಹೇರಿ ನರಿ ಬುದ್ದಿಯ ಪಿತೂರಿತನವನ್ನು ಶಿವಸೇನೆ ಪುಂಡರು ಮಾಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಹಿಂದೆ ಮರಾಠಿ ಮತ್ತು ಕನ್ನಡ ಭಾಷೆಗಳ ನಡುವೆ ದ್ವೇಷದ ಕಿಡಿ ಹಚ್ಚಿ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿದ್ದರು, ಇದಕ್ಕೆ ಪ್ರತಿಯಾಗಿ ಕನ್ನಡ ಪರ ಹೋರಾಟಗಾರರು ಶಿವಸೇನೆ ಪುಂಡರ ಪುಂಡಾಟಿಕೆಯನ್ನು ಖಂಡಸಿ ಪ್ರತಿಭಟಿಸಿದ್ದರು.
ಜಿಲ್ಲೆಯಲ್ಲಿರುವ ಮರಾಠಿ ಭಾಷೆಯ ನಾಮಫಲಕಳಿಗೆ ಎರಡು ಸಂಘಟನೆಗಳ ನಡುವೆ “ಮಸಿ” ಬಳಿಯುವ ಜಟಾಪಟಿ ನಡೆದಿತ್ತು. ನಿನ್ನೆ ರಾತ್ರಿ ಇದರ ಪ್ರತಿಯಾಗಿ ಶಿವಸೇನೆ ತನ್ನ ನರಿ ಬುದ್ದಿ ಬಳಸಿದೆ. ತನ್ನ ರಾಜ್ಯದ ಸಾರ್ವಜನಿಕ ಸಂಪತ್ತಗಳಿಗೆ ಹಾನಿ ಮಾಡಿ, ಅದರ ಅಪವಾದಗಳನ್ನು ಕನ್ನಡಿಗರ ಮೇಲೆ ಹೊರಿಸುವ ಹೇಯ ಕೃತ್ಯಕ್ಕೆ ಇಳಿದಿದೆ.
ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಎರಡು ರಾಜ್ಯಗಳ ಸಾರಿಗೆ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಗಡಿಭಾಗದ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದಾರೆ. ಕರ್ನಾಟಕದಿಂದ ಸಂಚುರಿಸುತ್ತಿದ್ದ 400 ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿರುವುದಾಗಿ ಬೆಳಗಾವಿ ವಿಭಾಗದ ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿ ಮಹಾದೇವಪ್ಪ ಮುಂಜಿ ತಿಳಿಸಿದ್ದಾರೆ.
ಇದಷ್ಟೆಲ್ಲದೆ ಮಹಾರಾಷ್ಟ್ರ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಾ ಕರ್ನಾಟಕಕ್ಕೆ ಸಂಚರಿಸುತ್ತಿದ್ದ 58 ಬಸ್ಸುಗಳ ಸಂಚಾರ ಸ್ಥಗಿತ ಮಾಡಿ ಆದೇಶ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಶಿವಸೇನೆ ಪುಂಡರು ಕೊಲ್ಲಾಪುರದಲ್ಲಿ ಕರ್ನಾಟಕ ಬಸ್ಸುಗಳ ಮೇಲೆ ಕಲ್ಲು ತೂರಿ ಕನ್ನಡದ ಹೆಸರುಗಳಿಗೆ ಮಸಿ ಬಳಿಯುವ ಕೃತ್ಯಗಳನ್ನ ಮಾಡಿದ್ದರು.