ಮಾಜಿ ಶಾಸಕ ಮಧು ಬಂಗಾರಪ್ಪ ಜೊತೆಗೆ ಈಡಿಗ ಸಮುದಾಯದ ಮತಗಳು ಕಾಂಗ್ರೆಸ್ ಗೆ ಶಿಫ್ಟ್?
ಬೆಂಗಳೂರು: ಹಲವು ಚುನಾವಣೆಗಳಲ್ಲಿ ಸೋಲನುಭಿಸಿರುವ ಕಾಂಗ್ರೆಸ್ ಪಕ್ಷ ಮಧು ಬಂಗಾರಪ್ಪ ಸೇರ್ಪಡೆಯಿಂದ ಮಹತ್ವದ ಫಲಿತಾಂಶ ನಿರೀಕ್ಷಿಸುತ್ತಿದೆ.
ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅತ್ಯುತ್ಸಾಹದಿಂದ ಪಕ್ಷಕ್ಕೆ ಸ್ವಾಗತಿಸುತ್ತಿದ್ದಾರೆ. ಮಧು ಬಂಗಾರಪ್ಪ ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಈಡಿಗ ಸಮುದಾಯದ ಮತಗಳನ್ನು ಕಾಂಗ್ರೆಸ್ ಗೆ ತರಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
ತಮ್ಮ ತಂದೆ ಬಂಗಾರಪ್ಪ ಅವರಂತೆಯೆ ಮಧು ಕೂಡ ಕಾಂಗ್ರೆಸ್ ಗೆ ಉತ್ತಮ ವರ್ಚಸ್ಸು ತರಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸೇರಿದಂತೆ ಎಲ್ಲರ ಅಭಿಪ್ರಾಯವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ತೀರಾ ಹೀನಾಯ ಸ್ಥಿತಿ ತಲುಪಿದೆ, ಈ ನಾಲ್ಕು ಜಿಲ್ಲೆಗಳಲ್ಲಿ ಈಡಿಗ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಗೆ, ಹೀಗಾಗಿ ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ತುಂಬಾ ನಷ್ಟವಾಗಿದೆ.
ಇನ್ನೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರಿಗೂ ಕೂಡ ಶಿವಕುಮಾರ್ ಸ್ವಾಗತ ಕೋರಿದ್ದಾರೆ. ಶೀಘ್ರದಲ್ಲೆ ಮಧು ಮತ್ತು ಅವರ ಸಹೋದರಿ ಗೀತಾ ಕಾಂಗ್ರೆಸ್ ಸೇರಲಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ, ಮಧು ಅವರಿಗೆ ಅವರ ತಂದೆಯ ಆಶೀರ್ವಾದವಿದೆ, ಈಗಾಗಿ ರಾಜಕೀಯವಾಗಿ ತಮ್ಮ ತಂದೆ ಬಂಗಾರಪ್ಪ ಅವರ ಪರಂಪರೆ ಮುಂದುವರಿಸಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ.