ರಾಷ್ಟ್ರದ ಮೊದಲ ಎಸಿ ರೈಲು ನಿಲ್ದಾಣ ಬೆಂಗಳೂರಲ್ಲಿ ಶೀಘ್ರವೇ ಓಪನ್‌: ಸಿಲಿಕಾನ್‌ ಸಿಟಿಯ ಮುಕುಟಕ್ಕೆ ಮತ್ತೊಂದು ಗರಿ

ಬೆಂಗಳೂರು: ನಗರದ ಬೈಯಪ್ಪನಹಳ್ಳಿಯಲ್ಲಿ ಒಟ್ಟು 314 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ರೈಲು ನಿಲ್ದಾಣ ದೇಶದ ಮೊದಲ ಹವಾನಿಯಂತ್ರಿತ (ಏ.ಸಿ) ವಿಮಾನವಾಗಿರಲಿದೆ ಎಂದು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಭಾರತದ ಮೊಟ್ಟ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ (ಏ.ಸಿ) ರೈಲ್ವೆ ನಿಲ್ದಾಣಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ನೈಋತ್ಯ ರೈಲ್ವೇ ನಿರ್ಮಾಣ ಮಾಡಿರುವ ಈ ನೂತನ ಟರ್ಮಿನಲ್‌ಗೆ ಇತ್ತೀಚೆಗೆ ಸರ್‌.ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು.

2015-16ರಲ್ಲಿ ಬೈಯಪ್ಪನಹಳ್ಳಿಯ ಹೊಸ ಟರ್ಮಿನಲ್‌ಗೆ ಮಂಜೂರಾತಿಯಾಗಿತ್ತು. ಈ ಹೊಸ ಟರ್ಮಿನಲ್‌ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ವಿಶಾಲ ಪ್ಲಾಟ್‌ಫಾರಂಗಳು, ಶೌಚಾಲಯ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್‌, ಬಸ್‌ಬೇ ಸೇರಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಿಮಾನ ನಿಲ್ದಾಣದ ಅನುಭವವನ್ನೇ ಈ ರೈಲ್ವೇ ನಿಲ್ದಾಣ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ ಮೂರನೇ ಕೋಚಿಂಗ್‌ ಟರ್ಮಿನಲ್‌ ಇದಾಗಿದೆ. ಈ ಟರ್ಮಿನಲ್‌ ಉದ್ಘಾನೆ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯಶವಂತಪುರ ನಿಲ್ದಾಣಗಳ ಜನದಟ್ಟಣೆ ಕಡಿಮೆಯಾಗಬಹುದು. ನಿತ್ಯ 50 ಸಾವಿರ ಪ್ರಯಾಣಿಕರಿಗೆ ನಿಲ್ದಾಣ ಬಳಕೆಯಾಗುವ ನಿರೀಕ್ಷೆ ಇದೆ.

ಒಟ್ಟು 4200 ಚದರ ಮೀಟರ್‌ ವ್ಯಾಪ್ತಿಯಲ್ಲಿ ಈ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಏಳು ಪ್ಲಾಟ್‌ಫಾರಂ, ಏಳು ಸ್ಲಾಬಿಂಗ್ ಲೈನ್‌ ಹಾಗೂ ಮೂರು ಪಿಟ್‌ಲೈನ್‌ಗಳಿವೆ.

ನಿಲ್ದಾಣದಾದ್ಯಂತ ಎಲ್‌ಇಡಿ ದೀಪ ಅಳವಡಿಸಲಾಗಿದೆ. ವಿಐಪಿ ಲಾಂಜ್‌, ಫುಡ್‌ಕೋರ್ಟ್‌, ಎಸ್ಕಲೇಟರ್‌, ಲಿಫ್ಟ್‌, ಪ್ಲಾಟ್‌ಫಾರಂಗಳ ನಡುವೆ ಸಂಪರ್ಕಕ್ಕೆ ಸಬ್‌ ವೇ ನಿರ್ಮಿಸಲಾಗಿದೆ. ನಿತ್ಯ 50 ರೈಲು ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.

ಈ ನಿಲ್ದಾಣ ಪರಿಸರ ಸ್ನೇಹಿಯಾಗಿರಲಿದ್ದು, ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. 250 ಕಾರು ಹಾಗೂ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *