ಬೀದರ್: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆ ಸ್ಥಗಿತ
ಬೀದರ್: ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಇಕೆಆರ್‌ಟಿಸಿ) ನೆರೆಯ ರಾಜ್ಯಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಆಳಂದ ತಾಲ್ಲೂಕಿನ ಹಿರೋಲಿ ಮತ್ತು ಖಜುರಿ ಹಾಗೂ ಅಫ್ಜಲ್ಪುರ ತಾಲ್ಲೂಕಿನ ಮಾಶಾಲ ಮತ್ತು ಬಲೂರ್ಗಿ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಆರ್‌ಟಿ-ಪಿಸಿಆರ್ ನೆಗೆಟೀವ್ ವರದಿಗಳನ್ನು ನೀಡಿದ ನಂತರವೇ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ಜಿಲ್ಲೆಗೆ ಪ್ರವೇಶಿಸಲು ಅನುಮತಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ.
ಮಹಾರಾಷ್ಟ್ರಕ್ಕೆ ಪ್ರತಿದಿನ ಸುಮಾರು 60 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮಹಾರಾಷ್ಟ್ರ ಸಾರಿಗೆ ನಿಗಮದ ಒಟ್ಟು 12 ಬಸ್ ಗಳು ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸುತ್ತಿವೆ. ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ, ಮುಂದಿನ ಆದೇಶ ಬರುವವರೆಗೆ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಎನ್‌ಇಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ ಕೊಟ್ರಪ್ಪ ತಿಳಿಸಿದ್ದಾರೆ.
ಈ ಮಧ್ಯೆ, ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಾಗ್ಪುರ ಜಿಲ್ಲೆಯಲ್ಲಿ ಒಂದು ವಾರದವರೆಗೆ ಲಾಕ್‍ಡೌನ್ ಹೇರಿದ ನಂತರ ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಲಾತೂರ್‌ನ ಎಂಐಡಿಸಿ ಹಾಸ್ಟೆಲ್‌ನ ಒಟ್ಟು 44 ವಿದ್ಯಾರ್ಥಿಗಳಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ, 19 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಭೀತಿಯುಂಟಾಗಿದೆ.ಮಹಾರಾಷ್ಟ್ರದಿಂದ ಬೀದರ್ ಪ್ರವೇಶಿಸಲು ಆರು ಮಾರ್ಗಗಳಿವೆ. ಆದರೆ, ಜಿಲ್ಲಾಡಳಿತ ಮೂರು ಜಿಲ್ಲೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದರಿಂದ, ಪ್ರಯಾಣಿಕರು ಜಿಲ್ಲೆಗೆ ಪ್ರವೇಶಿಸಲು ಇತರ ಮಾರ್ಗಗಳನ್ನು ಬಳಸುತ್ತಿದ್ದಾರೆ.
ಅತ್ತ ಕರ್ನಾಟಕದಿಂದ ಮಾತ್ರವಲ್ಲ.. ಬದಲಿಗೆ ಮಹಾರಾಷ್ಟ್ರದಿಂದಲೂ ಕಲಬುರ್ಗಿಗೆ ಬಸ್ ಬರುತ್ತಿಲ್ಲ ಎಂಬ ವಿಚಾರ ವರದಿಯಾಗಿದೆ. ಆದರೆ, ಬೀದರ್ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಬೀದರ್ ಮತ್ತು ಮಹಾರಾಷ್ಟ್ರದ ನಡುವೆ ಬಸ್‌ಗಳ ಸಂಚಾರ ಮುಂದುವರೆದಿದೆ. ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಬರಲು ಆರು ಮಾರ್ಗಗಳಿವೆ. ಬೀದರ್ ಜಿಲ್ಲಾಡಳಿತವು ಮೂರು ಸ್ಥಳಗಳಲ್ಲಿ ಮಾತ್ರ ಚೆಕ್‌ಪೋಸ್ಟ್ ತೆರೆದಿದೆ. ಇಲ್ಲಿ ತಪಾಸಣೆ ಬಿಗಿಗೊಳಿಸಿರುವ ಕಾರಣ ಮಹಾರಾಷ್ಟ್ರದಿಂದ ಬರುತ್ತಿರುವ ಜನ ಬೇರೆ ಮಾರ್ಗಗಳ ಮೂಲಕ ಜಿಲ್ಲೆ ಪ್ರವೇಶಿಸುತ್ತಿದ್ದಾರೆ.
‘ಪ್ರಸ್ತುತ 100 ಜನರನ್ನು ಪರೀಕ್ಷಿಸಿದರೆ ಇಬ್ಬರಲ್ಲಿ ಕೋವಿಡ್ ಕಂಡು ಬರುತ್ತಿದೆ. ಹೀಗಾಗಿ ಬೀದರ್ ಕೆಂಪು ವಲಯದಲ್ಲಿ ಗುರುತಿಸಿಕೊಂಡಿದೆ. ಗಡಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ
ಇನ್ನು ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ರಾಜ್ಯದ ಗಡಿಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು ಜಿಲ್ಲೆಯ ಬಾವಲಿ ಸಮೀಪ ಹಾಗೂ ಕೊಡಗಿನ ಕುಟ್ಟ ಹಾಗೂ ಮಾಕುಟ್ಟ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್ ಪರೀಕ್ಷೆ ಇಲ್ಲದೇ ಬರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಆದರೆ, ಚಾಮರಾಜನಗರದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾತ್ರ ಮಾಡಲಾಗುತ್ತಿದೆ.
ಕಾಟಾಚಾರದ ತಪಾಸಣೆ
ಅಂತೆಯೇ ಬೆಳಗಾವಿ ಗಡಿಯಲ್ಲಿ ತಪಾಸಣೆಯು ಕಾಟಾಚಾರಕ್ಕೆ ಎನ್ನುವಂತೆ ನಡೆಯುತ್ತಿರುವುದು ಕಂಡುಬಂದಿದೆ. ರಾಜ್ಯದ ಗಡಿಯಲ್ಲಿ ಆ ರಾಜ್ಯದಿಂದ ಕಾರುಗಳಲ್ಲಿ ಬರುವವರಿಂದ ಮಾತ್ರವೇ ಕೋವಿಡ್–19 ನೆಗೆಟಿವ್ ವರದಿ ಕೇಳಲಾಗುತ್ತಿದೆ. ಉಳಿದ ವಾಹನಗಳಲ್ಲಿ ಬರುವವರನ್ನು ತಪಾಸಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ವಿಜಯಪುರದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಬಸ್ ಸಂಚಾರ ಮುಂದುವರಿದಿದೆ. ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುವವರಿಗೆ ಕೋವಿಡ್ ಪರೀಕ್ಷೆ ಮಾಡಿಸಿರಬೇಕು ಎಂಬ ನಿಯಮ ಕಡ್ಡಾಯವಿಲ್ಲ.
ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಶೇಕಡ 30ರಿಂದ 40ರಷ್ಟು ಕಡಿಮೆಯಾಗಿದೆ ಎಂದು ಬೆಳಗಾವಿಯ ಸಾರಿಗೆ ಅಧಿಕಾರಿಗಳು ತಿಳಿಸಿದರು. ಈ ಕುರಿತು ಮಾತನಾಡಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು, ‘ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಹೋಲಿಸಿದರೆ ಫೆಬ್ರುವರಿ, ಮಾರ್ಚ್‌ನಲ್ಲಿ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಹೇಳಿದರು.